ಧಾರವಾಡ: ಜೀವನದಲ್ಲಿ ಪ್ರಾಮಾಣಿಕತೆ, ಕಠಿಣ ಪರಿಶ್ರಮದಿಂದ ಮಾಡಿದ ಸಾಧನೆ ಎಂದಿಗೂ ವ್ಯರ್ಥವಾಗದು ಎಂದು ಜೆಎಸ್‌ಎಸ್ ವಿತ್ತಾಧಿಕಾರಿ ಡಾ|ಅಜಿತ ಪ್ರಸಾದ ಹೇಳಿದರು. ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಆರ್. ಎಸ್. ಹುಕ್ಕೇರಿಕರ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಧಿಸುವ ವ್ಯಕ್ತಿ ಹಿಂದೆ ಪಾಲಕರ ಸಂಸ್ಥೆಯ ಪರಿಶ್ರಮ, ಸಹಾಯ ಅಗಾಧವಾಗಿರುತ್ತದೆ. ಸಾಧಿಸುವ ಹಂಬಲ, ಪ್ರಾಮಾಣಿಕ ಪ್ರಯತ್ನ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತವೆ. ಸಾಧನೆ ಸುಮ್ಮನೆ ಆಗುವುದಿಲ್ಲ. ಅದು ಏಳು-ಬೀಳು ಕಲ್ಲು-ಮುಳ್ಳುಗಳ ರಹದಾರಿ. ಈ ದಾರಿಯಲ್ಲಿ ನಡೆಯಲು ಕಾಲುಗಳು ಗಟ್ಟಿ ಇದ್ದರೆ ಸಾಲದು. ಸಾಗುವ ಮನಸ್ಸಿರಬೇಕು ಎಂದರು.
ಖುಷಿ ಟಿಕಾರೆ ನಮ್ಮ ಕಾಲೇಜಿನ ಹಾಗೂ ಧಾರವಾಡದ ಹೆಮ್ಮೆ. ಇದೀಗ ಮಿಸ್ ಇಕೋ ಟೀನ್ -2021 ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡು ಡಿ.10ರಿಂದ ಡಿ.21ರವರೆಗೆ ಈಜಿಪ್ಟ್ನಲ್ಲಿ ನಡೆಯುವ ಮಿಸ್ ಇಕೋ ಟೀನ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸನ್ಮಾನ ಸ್ವೀಕರಿಸಿದ ಖುಷಿ ಟಿಕಾರೆ ಮಾತನಾಡಿ, ನನ್ನ ಸಾಧನೆಗೆ ಪಾಲಕರು ಮತ್ತು ಸಂಸ್ಥೆಯ ಸಹಾಯ, ಸಹಕಾರವೇ ಕಾರಣ. ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು. ನಿಕೋಟಿನ್ ಸ್ಪರ್ಧೆಯಲ್ಲಿ ಪರಿಸರ ಸಂರಕ್ಷಣೆಗೆ ಅತಿ ಮಹತ್ವ ನೀಡಲಾಗುತ್ತದೆ. ಸೌಂದರ್ಯದ ಜತೆಗೆ ಇತರೆ ಅಂಶಗಳನ್ನು ಪರಿಗಣಿಸಲಾಗುತ್ತದೆ. ಭಾರತ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಿದೆ. ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಸನ್ಮಾನಿಸಿ, ಹಣಕಾಸು ನೆರವು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅನನ್ಯ ಮತ್ತು ಶ್ರೀಗೌರಿ ಗಣಸ್ತುತಿ ಹಾಡುವ ಮೂಲಕ ಪ್ರಾರ್ಥಿಸಿದರು. ಮಹಾವೀರ ಉಪಾಧ್ಯೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ|ಶಿವಾನಂದ ಟವಳಿ ನಿರೂಪಿಸಿದರು. ಭಾರತಿ ಶಾನಭಾಗ ವಂದಿಸಿದರು.