ಹೊಸದಿಲ್ಲಿ : ಅಚಲ್ ಕುಮಾರ್ ಜ್ಯೋತಿ ಅವರು ಇಂದು ಗುರುವಾರ ದೇಶದ 21ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ದೇಶದಲ್ಲಿ ಮುಕ್ತ, ನ್ಯಾಯೋಚಿತ ಮತ್ತು ವಿಶ್ವಾಸಾರ್ಹ ಚುನಾವಣೆಗಳನ್ನು ನಡೆಸುವ ಬದ್ಧತೆಯನ್ನು ಕಾಯ್ದುಕೊಳ್ಳಲು ಆಯೋಗವು ತನ್ನ ಶಕ್ತಿ ಮೀರಿ ಪ್ರಯತ್ನಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
64ರ ಹರೆಯದ ಜ್ಯೋತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ನಿನ್ನೆ ಬುಧವಾರ ನಸೀಂ ಝೈದಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದುದನ್ನು ಅನುಸರಿಸಿ ಜ್ಯೋತಿ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾದರು. ಇವರು 1975ರ ಐಎಎಸ್ ಬ್ಯಾಚ್‌ನವರು.
2015ರ ಮೇ 8ರಂದು ಚುನಾವಣಾ ಆಯೋಗದ ತ್ರಿಸದಸ್ಯ ಮಂಡಳಿಯನ್ನು ಸೇರಿಕೊಂಡಿದ್ದ ಇವರು ಮುಂದಿನ ವರ್ಷ ಜನವರಿ 17ರ ತನಕ ಮುಖ್ಯ ಚುನಾವಣಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುವರು.
2013ರ ಜನವರಿಯಲ್ಲಿ ಇವರು ಗುಜರಾತ್ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಸಿಇಸಿ ಅಥವಾ ಇಸಿ ಅವರ ಕಾರ್ಯಾವಧಿ ಆರು ವರ್ಷ ಅಥವಾ 65 ವರ್ಷ ಪ್ರಾಯದ ತನಕ – ಇದರಲ್ಲಿ ಯಾವುದು ಮೊದಲೋ ಅದು.