ಬೆಂಗಳೂರು: ಐಪಿಎಲ್ ಪಂದ್ಯ ವೀಕ್ಷಣೆಗೆ ಬಂದಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಮೊಬೈಲ್ ಕಳವು ಮಾಡಿದ್ದ ಜಾರ್ಖಂಡ್ ಮೂಲದ ಆರೋಪಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಪಂಕಜ್ ಸಿಂಗ್ (32) ಬಂಧಿತ. ಈತನಿಂದ 19.50 ಲಕ್ಷ ರೂ. ಮೌಲ್ಯದ 32 ದುಬಾರಿ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರೆ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಸ್ಟೇಡಿಯಂ ಬಳಿ ಜನಸಂದಣಿ ಇರುವಾಗ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಮೇ 15ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ವೀಕ್ಷಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಸಿದ್ದಾಪುರದಿಂದ ತಮ್ಮ ಕುಟುಂಬ ಸಮೇತ ಬಂದಿದ್ದು, ನಿಮ್ಹಾನ್ಸ್ ಆಸ್ಪತ್ರೆ ಜಂಕ್ಷನ್‌ನಿಂದ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳ್ಳತನವಾಗಿದೆ. ಈ ಸಂಬಂಧ ಮಹಿಳಾ ಸಿಬ್ಬಂದಿ ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಠಾಣೆ ವ್ಯಾಪ್ತಿಯ ಸೋಮೇಶ್ವರನಗರ ಮುಖ್ಯರಸ್ತೆಯಲ್ಲಿರುವ
ಗೆಸ್ಟ್‌ಹೌಸ್ ಮುಂಭಾಗ ಮೊಬೈಲ್ ಮಾರಾಟಕ್ಕೆ ಮುಂದಾಗಿದ್ದ ಆರೋಪಿ ಪಂಕಜ್ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೊಬೈಲ್ ಕಳುವಿನ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, ತನ್ನ ಇತರೆ ಮೂವರು ಸಹಚರರ ಜತೆ ಸೇರಿಕೊಂಡು ಸ್ಟೇಡಿಯಂ ಬಳಿ ಐಪಿಎಲ್ ವೀಕ್ಷಕರ ಮೊಬೈಲ್ ಕಳವು ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.