ಮೈಸೂರು: ದೇಶದ ಗಮನ ಸೆಳೆದಿರುವ ಮಂಗಳೂರು ಬಾಂಬ್ ಸ್ಪೋಟ ಪ್ರಕರಣದ ರೂವಾರಿ ಮೈಸೂರಿನಲ್ಲಿ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದನೆಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಬಂಧಿತ ಉಗ್ರ ಶಾರೀಕ್ ಬಗ್ಗೆ ಮೈಸೂರಿನ ಮೊಬೈಲ್ ರಿಪೇರಿ ತರಬೇತುದಾರ ಪ್ರಸಾದ್ ಕೆಲವು ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ತೀರ್ಥಹಳ್ಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಶಾರೀಕ್ ಮೈಸೂರಿಗೆ ಬಂದು ಪ್ರೇಮ್ ರಾಜ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಅದೇ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಮೊಬೈಲ್ ರಿಪೇರಿಯ ತರಬೇತಿಗೆ ಸೇರಿಕೊಂಡಿದ್ದ. ಆಧಾರ್ ಕಾರ್ಡ್ ನಲ್ಲಿ ಧಾರವಾಡ ಜಿಲ್ಲೆಯ ವಿಳಾಸ ಮತ್ತು ಫೋಟೊ ಸಹ ಇತ್ತು. ಪ್ರೇಮ್ ಎಂದೇ ಸಹಿ ಮಾಡುತ್ತಿದ್ದ ಎಂದಿದ್ದಾರೆ.
‘ಕಾಲ್ ಸೆಂಟರ್ ಕೆಲಸಕ್ಕಾಗಿ ಮೈಸೂರಿಗೆ ಬಂದೆ. ಆದರೆ ಕಾಲ್ ಸೆಂಟರ್ ನವರು 20 ದಿನ ಕಾಯುವಂತೆ ಹೇಳಿದ್ದಾರೆ. ಹೀಗಾಗಿ ಮೊಬೈಲ್ ರಿಪೇರಿ ಮಾಡುವುದನ್ನು ಕಲಿಯುವ ತರಬೇತಿಗೆ ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದ ಬಂದಿದ್ದ. ಆತ ಯಾವುದೇ ರೀತಿಯ ಸಂಶಯಗಳು ಬರದಂತೆ ವರ್ತಿಸಿದ್ದ. ಹೀಗಾಗಿ ಆತನ ಬಗ್ಗೆ ನಮಗೆ ಅನುಮಾನ ಬರಲಿಲ್ಲ. ಕನ್ನಡ ಭಾಷೆಯನ್ನು ತುಂಬಾ ಸ್ಪಷ್ಟವಾಗಿ ಮಾತನಾಡುತ್ತಿದ್ದ. 45 ದಿನಗಳ ಕೋರ್ಸ್ ಗೆ ಸೇರ್ಪಡೆಯಾಗಿದ್ದ. ತರಗತಿಗೂ ಸರಿಯಾಗಿ ಬರುತ್ತಿರಲಿಲ್ಲ. ಇನ್ನು 15 ಕಳೆದಿದ್ದರೆ ಆತ ಸರ್ವಿಸ್ ಇಂಜಿನಿಯರ್ ಆಗುತ್ತಿದ್ದ ಎಂಬ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ ಪ್ರಸಾದ್.
ಇದನ್ನೂ ಓದಿ:ಸ್ಯಾಂಟ್ನರ್ ಮಿಸ್ ಫೀಲ್ಡ್, ಭಾರತ-ಕಿವೀಸ್ ಟಿ20 ಪಂದ್ಯ ಟೈ: ಹಾರ್ದಿಕ್ ಪಡೆಗೆ ಸರಣಿ ಜಯ
ತರಬೇತಿ ವೇಳೆಯೂ ಡಮ್ಮಿ ಮೊಬೈಲ್ ಗಳನ್ನು ರಿಪೇರಿ ಮಾಡಿದ್ದಾನೆ. ತನ್ನ ಮೊಬೈಲ್ ಗೆ ಬರುವ ಕರೆಗಳಿಗೂ ಕನ್ನಡದಲ್ಲೇ ಉತ್ತರ ಕೊಡುತ್ತಿದ್ದ. ಪೊಲೀಸರಿಗೆ ಈತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಟ್ಟಿದ್ದೇನೆ. ಯುವ ಸಮುದಾಯದ ಮುಂದಿನ ಜೀವನೋಪಾಯಕ್ಕಾಗಿ ನಾವು ಮೊಬೈಲ್ ರಿಪೇರಿ ಮಾಡುವುದನ್ನು ಕಲಿಸುತ್ತೇವೆ. ಅದನ್ನು ಈ ರೀತಿ ದುರುದ್ದೇಶಕ್ಕೆ ಬಳಸಿಕೊಂಡರೆ ನಾನು ಏನು ಮಾಡಲು ಸಾಧ್ಯವಿಲ್ಲ. ಆತ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆಂಬ ವಿಚಾರ ತಿಳಿದು ಆಘಾತವಾಯಿತು. ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿ ತರಬೇತಿ ನೀಡುತ್ತಿದ್ದೇವೆ. ಯಾರು ಸಹ ಈ ರೀತಿ ಮಾಡುತ್ತಿರಲಿಲ್ಲ. ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿರುವುದು ತುಂಬಾ ಬೇಸರ ತರಿಸಿದೆ ಎಂದು ಪ್ರಸಾದ್ ಹೇಳಿದ್ದಾರೆ.