ಬಳ್ಳಾರಿ: ನಗರದ ಪಾಲಿಕೆ ಕಚೇರಿ ಆವರಣದಲ್ಲಿನ ಬಳ್ಳಾರಿ ಒನ್ ಕೇಂದ್ರದಲ್ಲಿ ಕಳೆದ ತಿಂಗಳು ನಡೆದಿದ್ದ 75 ಲಕ್ಷ ರೂ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗಾಂಧಿನಗರ ಠಾಣೆಯ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ನಿವಾಸಿ ಎಸ್.ಟಿ.ಎಂ.ಕೆ.ಚಂದ್ರಶೇಖರಯ್ಯ ಬಂಧಿತ ಆರೋಪಿಯಾಗಿದ್ದು, ಮತ್ತೊಬ್ಬ ಆರೋಪಿ ಕೆ.ಮಹಾಲಿಂಗಯ್ಯ ನಾಪತ್ತೆಯಾಗಿದ್ದಾನೆ. ನಗರದ ಪಾಲಿಕೆ ಕಚೇರಿ ಆವರಣದಲ್ಲಿದ್ದ ಬಳ್ಳಾರಿ ಒನ್ ಕೇಂದ್ರದಲ್ಲಿ ಕಳೆದ ಏಪ್ರಿಲ್ 28 ರಂದು ರಾತ್ರಿ ಕೇಂದ್ರದಲ್ಲಿದ್ದ 75 ಲಕ್ಷ ರೂ.ಗಳು ಕಳುವಾಗಿತ್ತು. ಆದರೆ, ಕೇಂದ್ರದ ಯಾವುದೇ ಬೀಗ ಮುರಿಯದೇ ಹಣ ಕಳುವಾಗಿದ್ದು, ಕೇಂದ್ರದ ಬೀಗ ಇಟ್ಟುಕೊಳ್ಳುತ್ತಿದ್ದ ಸಿಬ್ಬಂದಿ ಅಂದ್ರಾಳ್ ಗ್ರಾಮದ ಕೆ.ಮಹಾಲಿಂಗ ಎನ್ನುವವನು ಹಣವನ್ನು ಕಳ್ಳತನ ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಕರ್ನಾಟಕ ಕೇಂದ್ರದ ರಾಜ್ಯ ಯೋಜನಾ ವ್ಯವಸ್ಥಾಪಕ ಉದಯಕುಮಾರ್ ಅರ್ಕಸಾಲಿ ಎನ್ನುವವರು ಇಲ್ಲಿನ ಗಾಂಧಿನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಭೇದಿಸಲು ಎಸ್ ಪಿ ರಂಜಿತ್ ಕುಮಾರ್ ಬಂಡಾರು ಅವರು ಗಾಂಧಿನಗರ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಗಡಾದ, ಪಿಎಸ್ ಐ ಸೌಮ್ಯ, ನಾರಾಯಣ ಸ್ವಾಮಿ, ಅಪರಾಧ ವಿಭಾಗದ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ತನಿಖೆ ಕೈಗೊಂಡ ತಂಡವು ಹಲವು ವೈಜ್ಞಾನಿಕ ವಿಧಾನಗಳನ್ನು ಬಳಸಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ನಿವಾಸಿಯಾದ ಆರೋಪಿ ಎಸ್.ಟಿ.ಎಂ.ಕೆ.ಚಂದ್ರಶೇಖರಯ್ಯನನ್ನು ಬಂಧಿಸಿದೆ. ಬಂಧಿತನಿಂದ 72 ಲಕ್ಷ ರೂ. ನಗದು ಹಣ, ಕೃತ್ಯಕ್ಕೆ ಬಳಸಿದ್ದ ಒಂದು ಎಸ್ ಪಿ ಮೋಟರ್ ಬೈಕ್, ಕಳ್ಳತನ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಆರೋಪಿ ಅಂದ್ರಾಳ್ ಗ್ರಾಮದ ಕೆ.ಮಹಾಲಿಂಗನೇ ಚಂದ್ರಶೇಖರಯ್ಯನಿಗೆ ಬೀಗ ನೀಡಿದ್ದು, ಈ ಬೀಗವನ್ನು ಬಳಸಿ ಕಳ್ಳತನ ಮಾಡಿ, ಪುನಃ ಬೀಗವನ್ನು ಮನೆಯ ಬಾಗಿಲಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿ ಚಂದ್ರಶೇಖರಯ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮತ್ತೊಬ್ಬ ಆರೋಪಿ ಕೆ.ಮಹಾಲಿಂಗ ಪರಾರಿಯಾಗಿದ್ದಾನೆ. ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಭೇದಿಸಿದ ಗಾಂಧಿನಗರ ಪೊಲೀಸರ ತಂಡಕ್ಕೆ ಎಸ್ ಪಿ ರಂಜಿತ್ ಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.