ಆನೇಕಲ್: ನಕಲಿ ದಾಖಲೆಗಳನ್ನು ಸೃಷ್ಠಿಸಿ ಗ್ರಾಮದ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ, ಪಟ್ನಗೆರೆ ಗೊಲ್ಲಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು. ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ನಗೆರೆ ಗೊಲ್ಲಹಳ್ಳಿ ಗ್ರಾಮದ ಹೊರವಲಯದ ಜಾಗದಲ್ಲಿ 200 ವರ್ಷದಿಂದ ವಾಸವಿರುವ ಕುಟುಂಬಗಳನ್ನು ಏಕಾಏಕಿ ಖಾಲಿ ಮಾಡುವಂತೆ ಕ್ರಯದರರೊಬ್ಬರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಗೊಲ್ಲಹಳ್ಳಿ ಗ್ರಾಮ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಗ್ರಾಮಕ್ಕೆ ನೀಡಲಾಗಿದೆ. ಆದರೆ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿನೆ ಮಾಡದೇ, ನಕಲಿ ದಾಖಲೆ ಸೃಷ್ಟಿ ಮಾಡಿ ಗ್ರಾಮವನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಗ್ರಾಪಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಕಲಿ ದಾಖಲೆ ಸೃಷ್ಠಿಸಿ ಮಾಡಿ ಎಸ್.ಶಂಕರ್ ಎಂಬುವವರಿಗೆ ಖಾತೆ ಮಾಡಿದ ಆರೋಪ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮೇಲಿದ್ದು, ಅವರು ಬಂದು ಮಾಹಿತಿ ನೀಡುವವರೆಗೆ ಪ್ರತಿಭಟನೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಇನ್ನೂರು ವರ್ಷದಿಂದ 80 ಮನೆಗಳಲ್ಲಿ ಸಾವಿರಾರು ಜನ ಗ್ರಾಮದಲ್ಲಿ ವಾಸವಿದ್ದು, ಇದ್ದಕಿದ್ದಂತೆ ಬಂದು ಗ್ರಾಮ ಖಾಲಿ ಮಾಡುವಂತೆ ಕ್ರಯದಾರರು ಒತ್ತಡ ಹಾಕುತ್ತಿದ್ದಾರೆ.
ನಕಲಿ ಸೃಷ್ಟಿ ಮಾಡಿರುವ ವಣಕನಹಳ್ಳಿ ಪಂಚಾಯಿತಿ ಅಧಿಕಾರಿಗಳು, ಬಲಾಡ್ಯರೊಂದಿಗೆ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಹೋರಾಟಗಾರ ಪ್ರಕಾಶ್, ರಗ್ಗೇಶ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಅಧ್ಯಕ್ಷ.ಎಂ.ಸಿ ಹಳ್ಳಿ ವೇಣು, ಸಿಪಿಎಂ ಯುವ ಮುಖಂಡ ಮಧು, ಕುಮಾರ್, ರಾಜು, ಅಣ್ಣಯ್ಯ ,ಗುಡ್ನಳ್ಳಿ ರವಿ, ಮುನಿವೀರಪ್ಪ,ಮುನಿಯಪ್ಪ, ಕಾವೇರಪ್ಪ, ರಾಮಚಂದ್ರ, ಮತ್ತಿತರರು ಇದ್ದರು.
ನೂರಾರು ವರ್ಷಗಳ ಹಿಂದೆ ನಮ್ಮ ತಾತ ಮುತ್ತಾತಂದಿರು ಇದೇ ಗ್ರಾಮದಲ್ಲಿ ವಾಸವಿದ್ದರು.ಈಗ ಏಕಾಏಕಿ ಗ್ರಾಮಕ್ಕೆ ಭೇಟಿ ನೀಡುತ್ತಿರುವ ಕೆಲವರು ನಮ್ಮನ್ನು ಊರನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಎಲ್ಲಿಗೆ ಹೋಗಬೇಕು ಎಂದು ತೋಚುತ್ತಿಲ್ಲ ನಮಗೆ ನ್ಯಾಯ ದೊರಕಿಸಿಕೊಡಿ.
-ಮುನಿಯಮ್ಮ, ಗ್ರಾಮಸ್ಥೆ
ಗ್ರಾಮ ಪಂಚಾಯಿತಿಯಿಂದಲೇ ಅಲ್ಲಿನ ಸ್ಥಳೀಯರಿಗೆ ಖಾತೆ ಮಾಡಿಕೊಡಲಾಗಿದೆ ಗ್ರಾಮವನ್ನು ಖಾಲಿ ಮಾಡಿಕೊಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಇದನ್ನು ಇಲ್ಲಿನ ಅಧಿಕಾರಿಗಳು ಹೇಗೆ ಮಾಡಿದ್ದಾರೆ ಎನ್ನುವುದನ್ನು ಚರ್ಚಿಸಿ ಸ್ಥಳೀಯರಿಗೆ ನ್ಯಾಯ ಒದಗಿಸಲು ಒಂದಾಗುತ್ತೇವೆ.
-ಆರ್.ದೇವರಾಜು, ಗ್ರಾಪಂ ಉಪಾಧ್ಯಕ್ಷ