Advertisement

Accused: ಕೊಲೆ ಯತ್ನ ಪ್ರಕರಣದ ಆರೋಪಿ 19 ವರ್ಷಗಳ ಬಳಿಕ ಹಾಸನದಲ್ಲಿ ಬಂಧನ

11:20 AM Jun 01, 2024 | Team Udayavani |

ಬೆಂಗಳೂರು: ಕೊಲೆ ಯತ್ನ ಪ್ರಕರಣದಲ್ಲಿ ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹಾಸನ ಜಿಲ್ಲೆ ಆಲೂರು ಗ್ರಾಮದ ನಿವಾಸಿ ದೊಡ್ಡೇಗೌಡ ಅಲಿಯಾಸ್‌ ಚಂದ್ರು (45) ಬಂಧಿತ ಆರೋಪಿ.

ಈತ 2005ರಲ್ಲಿ ಹನುಮಂತನಗರದ 50 ಅಡಿ ರಸ್ತೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಬೇಕರಿ ಮಾಲೀಕನ ಜತೆ ಹಣಕಾಸಿನ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಕೆಲಸ ಕೂಡ ಬಿಟ್ಟಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ 2005ರ ಜ.13ರ ರಾತ್ರಿ ಸುಮಾರು 8.30ಕ್ಕೆ ಬೇಕರಿ ಮಾಲೀಕನ ಮನೆಗೆ ನುಗ್ಗಿದ ಆರೋಪಿ, ಅವರ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಈ ಸಂಬಂಧ ಹನುಮಂತನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಎಲ್ಲೆಡೆ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಆತ ತಲೆಮರೆ ಸಿಕೊಂಡಿದ್ದಾನೆ ಎಂದು ಕೋರ್ಟ್‌ಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಆ ಬಳಿಕ ವಿಚಾರಣೆ ಆರಂಭಿಸಿದ ನ್ಯಾಯಾಲಯ ಆರೋಪಿಯ ಬಂಧನಕ್ಕೆ ಹಲವು ಬಾರಿ ವಾರೆಂಟ್‌ ಹೊರಡಿಸಿತ್ತು. ಕೊನೆಗೆ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ 2020ರಲ್ಲಿ ಈ ಪ್ರಕರಣವನ್ನು ಲಾಂಗ್‌ ಪೆಂಡಿಂಗ್‌ ರಿಪೋರ್ಟ್‌ (ಎಲ್‌ಪಿಆರ್‌) ಪ್ರಕರಣವೆಂದು ಘೋಷಿಸಲಾಗಿತ್ತು.

ಆಟೋ ಚಾಲಕನಾಗಿದ್ದ ಆರೋಪಿ: ಇತ್ತೀಚೆಗೆ ಎಲ್‌ ಪಿಆರ್‌ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಚ್ಚುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರತಿ ಪೊಲೀಸ್‌ ಠಾಣೆಯ ಠಾಣಾಧಿ ಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದ ದೊಡ್ಡೇಗೌಡ ಹಾಸನ ಜಿಲ್ಲೆಯ ಆಲೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಊರಿನಲ್ಲಿ ಆಟೋ ಚಾಲಕನಾಗಿದ್ದ. ಜತೆಗೆ ವ್ಯವಸಾಯ ಮಾಡಿಕೊಂಡಿದ್ದ ಎಂಬುದು ಗೊತ್ತಾಗಿದೆ. ಸದ್ಯ ಆರೋಪಿಯನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next