Advertisement

Udupi:ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

01:43 AM Aug 09, 2023 | Team Udayavani |

ಉಡುಪಿ: ಕೋಟ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ(ಪೋಕೊÕ) ತ್ವರಿತ ವಿಶೇಷ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬ್ರಹ್ಮಾವರ ತಾಲೂಕು ಬಾಳಕುದ್ರು ನಿವಾಸಿ ಅಶೋಕ್‌ ಎ. (32) ಶಿಕ್ಷೆಗೆ ಗುರಿಯಾಗಿರುವ ಆರೋಪಿ.

Advertisement

15ರ ಹರೆಯದ ಬಾಲಕಿಯನ್ನು ಪರಿಚಯ ಮಾಡಿಕೊಂಡ ಅಶೋಕ್‌,ಶಾಲೆಗೆ ಹೋಗುವ ಸಮಯ ಆಕೆ
ಯನ್ನು ತನ್ನ ಕಾರಿನಲ್ಲಿ ಇನ್ನೋರ್ವ ಆರೋಪಿಯ ಮನೆಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಬಲಾತ್ಕಾರವಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿ ಮನೆಗೆ ಬಿಟ್ಟಿದ್ದನು. ಇದೇ ವೇಳೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು.

ನೊಂದ ಬಾಲಕಿ ಬೇಸರದಲ್ಲಿರು ವುದನ್ನು ಗಮನಿಸಿದ ಆಕೆಯ ಮನೆಯವರು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂತು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಆಗಿನ ಡಿವೈಎಸ್ಪಿ ಜೈಶಂಕರ್‌ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ಈಗಾಗಲೇ ವಿವಾಹವಾಗಿದ್ದು ನೊಂದ ಬಾಲಕಿಗೆ ದೌರ್ಜನ್ಯ ಎಸಗಿರುವುದು ಬಾಲಕಿಯ ಸಾಕ್ಷ್ಯ ಮತ್ತು ಇತರ ಸಾಂಧರ್ಬಿಕ ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗೆ 20ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದರು. ಅಲ್ಲದೆ 23ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ 10ಸಾವಿರ ರೂ. ಸರಕಾರಕ್ಕೆ ಮತ್ತು 13ಸಾವಿರ ರೂ. ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕು ಮತ್ತು ಸಂತ್ರಸ್ತೆಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ಆದೇಶಿಸಿದರು.

ಬಾಲಕಿಯ ದೈಹಿಕ ದೌರ್ಜನ್ಯಕ್ಕೆ ಸಹಕರಿಸಿದ ಎನ್ನಲಾದ ಇನ್ನೋರ್ವ ಆರೋಪಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆಗೊಳಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಿಚಾರಣೆ ನಡೆಸಿದ್ದು, ಕುಂದಾಪುರದ ಸರಕಾರಿ ಅಭಿಯೋಜಕ ಹರಿಶ್ಚಂದ್ರ ವಾದ ಮಂಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next