ಅರಸೀಕೆರೆ: ಕಳೆದ ಫೆ. 11ರಂದು ನಗರದ ಅಂಚೆಕೊಪ್ಪಲು ರೈಲ್ವೇ ಸೇತುವೆ ಸಮೀಪ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಪ್ರಕರಣದ ಆರೋಪಿ ಹೇಮಂತ್ ದತ್ತ (20) ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಅರಸೀಕೆರೆ ತಾಲೂಕಿನ ಹಳೇ ಕಲ್ಲನಾಯಕನಹಳ್ಳಿ ಗ್ರಾಮದ ಹೇಮಂತ್ ನಾಯ್ಕ (23) ಕೊಲೆಯಾದ ದುರ್ದೈವಿ.
ಕೊಲೆಯಾದ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ಪ್ರೆಸ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇಮಂತ್ ದತ್ತ ಫ್ಲಿಪ್‌ಕಾರ್ಟ್‌ನಲ್ಲಿ 46 ಸಾವಿರ ರೂ. ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದನ್ನು ಹೇಮಂತ್ ನಾಯ್ಕ ಫೆ. 7ರಂದು ಹೇಮಂತ್ ದತ್ತನ ಮನೆಗೆ ಡೆಲಿವರಿ ಕೊಡಲು ಬಂದಿದ್ದ. ಆಗ ಐಫೋನ್ ಬಾಕ್ಸ್ ತೆರೆಯುವಂತೆ ಹೇಮಂತ್ ದತ್ತ ಹೇಳಿದ್ದು, ಹೇಮಂತ್ ನಾಯ್ಕ ನಿರಾಕರಿಸಿ ಹಣ ಪಾವತಿಸುವಂತೆ ಸೂಚಿಸಿದ್ದ. ಬಳಿಕ ಹೇಮಂತ್ ದತ್ತ ಕೊಡಲು ಹಣವಿಲ್ಲದೆ ಹೇಮಂತ್ ನಾಯ್ಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.
ಆ ಬಳಿಕ ಹೇಮಂತ್ ದತ್ತ ಮೃತದೇಹವನ್ನು ನಾಲ್ಕು ದಿನ ಮನೆಯಲ್ಲೇ ಇರಿಸಿಕೊಂಡಿದ್ದ. ಫೆ. 11ರಂದು ಗೋಣಿ ಚೀಲದಲ್ಲಿ ಮೃತದೇಹವನ್ನು ತುರುಕಿಸಿ ಮೋಟಾರ್ ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೇ ಸೇತುವೆ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದ.
ಹೇಮಂತ್ ನಾಯ್ಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಫೆ. 8ರಂದು ಸಹೋದರ ಮಂಜ ನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಆರೋಪಿ ಹೇಮಂತ್ ದತ್ತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ಗೆ ಕೊಡಲು ಹಣವಿಲ್ಲದೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.