ಬೆಂಗಳೂರು: ಪತ್ನಿಯನ್ನು ಪರಪುರುಷನ ಜತೆ ಓಡಿ ಹೋಗಲು ಸಹಾಯ ಮಾಡಿದ ಸ್ನೇಹಿತನನ್ನು ಹೊಡೆದು ಕೊಲೆಗೈದ ಆರೋಪದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಗಾರ ಸೇರಿ ಇಬ್ಬರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ನಿವಾಸಿಗಳಾದ ಕಿರಣ್ (32) ಮತ್ತು ಆತನ ಸ್ನೇಹಿತ ಅಕ್ಷಯ್ (31) ಬಂಧಿತರು.
ಆರೋ ಪಿಗಳು ಫೆ.4ರಂದು ರಾತ್ರಿ ಕೆಂಗೇರಿ ನಿವಾಸಿ ಹೇಮಂತ್ ಎಂಬಾತನನ್ನು ಹತ್ಯೆಗೈದಿದ್ದರು. ಆರೋಪಿಗಳ ಪೈಕಿ ಕಿರಣ್ ಸೆಕೆಂಡ್ ಹ್ಯಾಂಡ್ ಬೈಕ್‌ಗಳ ಮಾರಾಟಗಾರನಾಗಿದ್ದಾನೆ. ಹೀಗಾಗಿ ಕೆಂಗೇರಿಯ ಹೇಮಂತ್ ಪರಿಚಯವಾಗಿದೆ. ಕೆಲ ದಿನಗಳ ಹಿಂದೆ ಕಿರಣ್ ಪತ್ನಿ ಹೇಮಾ ಎಂಬಾಕೆ, ಕೊಲೆಯಾದ ಹೇಮಂತ್‌ನ ಸ್ನೇಹಿತ ಮರಿಸ್ವಾಮಿ ಎಂಬಾತನ ಜತೆ ಓಡಿ ಹೋಗಿದ್ದಳು. ಅದಕ್ಕೆ ಹೇಮಂತ್ ಸಹಾಯ ಮಾಡಿದ್ದ.
ಮತ್ತೂಂದೆಡೆ ಮನೆಯಿಂದ ಏಕಾಏಕಿ ನಾಪತ್ತೆಯಾದ ತನ್ನ ಪತ್ನಿಗಾಗಿ ಕಿರಣ್ ಎಲ್ಲೆಡೆ ಹುಡುಕಿದ್ದಾನೆ ಎಲ್ಲಿಯೂ ಪತ್ತೆಯಾಗಿಲ್ಲ. ಈ ನಡುವೆ ಹೇಮಂತ್, ಕಿರಣ್‌ಗೆ ಕರೆ ಮಾಡಿ, “ನಿನ್ನ ಪತ್ನಿ ಮರಿಸ್ವಾಮಿ ಜತೆ ಓಡಿ ಹೋಗಿದ್ದಾಳೆ’ ಎಂದಿದ್ದಾನೆ. ಅದರಿಂದ ಅಚ್ಚರಿಗೊಳಗಾದ ಕಿರಣ್ ಕೆಂಗೇರಿ ಸುತ್ತ-ಮುತ್ತ ಶೋಧಿಸಿದ್ದಾನೆ. ಎಲ್ಲಿಯೂ ಆಕೆ ಸಿಕ್ಕಿಲ್ಲ. ಬಳಿಕ ಅದರಿಂದ ಆಕ್ರೋಶಗೊಂಡ ಕಿರಣ್ ಅಕ್ಷಯ್ ಜತೆ ಫೆ.4ರಂದು ರಾತ್ರಿ 7ಗಂಟೆ ಸುಮಾರಿಗೆ ಕೆಂಗೇರಿಗೆ ಬಂದಿದ್ದು, ಹೇಮಂತ್‌ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಆ ಬಳಿಕ ಬೈಕ್‌ನಲ್ಲಿ ಹೇಮಂತ್‌ನನ್ನು ಕೂರಿಸಿಕೊಂಡ ಆರೋಪಿಗಳು ಬಾಗಲಗುಂಟೆ ಕಡೆ ಬಂದಿದ್ದಾರೆ. ಮಾರ್ಗ ಮಧ್ಯೆ ಎರಡು ಬಾರ್‌ಗಳಲ್ಲಿ ಮೂವರು ಮದ್ಯ ಸೇವಿಸಿ, ಬಳಿಕ ಅಲ್ಲಿಂದ ನೇರವಾಗಿ ಬಾಗಲಗುಂಟೆಯ ಪಾಪಣ್ಣಲೇಔಟ್‌ಗೆ ಹೇಮಂತ್‌ನನ್ನು ಕರೆ ತಂದಿದ್ದಾರೆ. ಆ ನಂತರ ಕಿರಣ್ ಮತ್ತು ಅಕ್ಷಯ್ ದೋಣೆ ಹಾಗೂ ಕಬ್ಬಿಣ ವಸ್ತುವಿನಿಂದ ಹೇಮಂತ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹೇಮಂತ್, ಸ್ವಲ್ಪ ದೂರ ನಡೆದುಕೊಂಡು ಬಂದು, ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಫೆ.5ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಹೇಮಂತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿಚಾರಣೆಯಲ್ಲಿ ತನ್ನ ಪತ್ನಿಯನ್ನು ಬೇರೊಬ್ಬನ ಜತೆ ಓಡಿ ಹೋಗಲು ಸಹಾಯ ಮಾಡಿದ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದೇನೆ. ಅದಕ್ಕೆ ಹೇಮಂತ್ ಸಹಾಯ ಮಾಡಿದ್ದ ಎಂದು ಹೇಳಿಕೆ ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.