ಬೆಂಗಳೂರು: ಬಾರ್‌ನಲ್ಲಿ ಆಗಷ್ಟೇ ಪರಿಚಯವಾದ ಗಾರೆ ಕಾರ್ಮಿಕನನ್ನು ಹಣದ ವಿಚಾರಕ್ಕೆ ಕೊಲೆಗೈದು ಪರಾರಿಯಾಗಿದ್ದ ಬಳ್ಳಾರಿ ಮೂಲದ ಯುವಕನನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಬಿ.ಸುನೀಲ್(28) ಬಂಧಿತ ಆರೋಪಿ. ಈತ ಫೆ.2ರಂದು ಸಂಜೆ ಕ್ಯಾತಸಂದ್ರ ನಿವಾಸಿ ಕುಮಾರಸ್ವಾಮಿ(35) ಎಂಬಾತನನ್ನು ಕ್ಯಾತಸಂದ್ರ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಹಳಿ ಬಳಿ ಕೊಲೆಗೈದಿದ್ದ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೂಲದ ಕುಮಾರಸ್ವಾಮಿ 3 ವರ್ಷಗಳ ಹಿಂದೆ ಕ್ಯಾತಸಂದ್ರಕ್ಕೆ ಬಂದಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ. ಇನ್ನು ಆರೋಪಿ ಸುನೀಲ್, 2ನೇ ತರಗತಿಯಿಂದ 9ನೇ ತರಗತಿವರೆಗೆ ಓದಿದ್ದು, 15 ವರ್ಷಗಳಿಂದ ಬಳ್ಳಾರಿಯಲ್ಲೇ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ.
ಆಗಷ್ಟೇ ಪರಿಚಯವಾದ ಗಾರೆ ಕಾರ್ಮಿಕ: ಫೆ.2ರಂದು ಬಳ್ಳಾರಿಯಿಂದ ತುಮಕೂರಿಗೆ ಬಂದಿದ್ದ ಆರೋಪಿ, ಹಳೇ ಸ್ನೇಹಿತರ ಜತೆ ಕೆಲ ಸಮಯ ಕಳೆದು, ಬಳಿಕ ಕ್ಯಾತಸಂದ್ರದ ಬಳಿಯ ಬಾರ್‌ಗೆ ಮದ್ಯ ಸೇವಿಸಲು ಸ್ನೇಹಿತರ ಜತೆ ಹೋಗಿದ್ದಾನೆ. ಅದೇ ವೇಳೆ ಮದ್ಯ ಸೇವಿಸಲು ಬಂದಿದ್ದ ಕುಮಾರಸ್ವಾಮಿಯ ಪರಿಚಯವಾಗಿದೆ. ಈ ವೇಳೆ ಕುಮಾರಸ್ವಾಮಿ, ತನಗೂ ಮದ್ಯ ಕುಡಿಸುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪಿದ ಸುನೀಲ್, ಎಲ್ಲರಿಗೂ ಕಂಠಪೂರ್ತಿ ಮದ್ಯ ಕುಡಿಸಿದ್ದಾನೆ.
ಈ ವೇಳೆ ಸುನೀಲ್ ಬಳಿ 19 ಸಾವಿರ ರೂ. ಇರುವುದನ್ನು ಗಮನಿಸಿದ ಕುಮಾರಸ್ವಾಮಿ, ತನಗೂ ಒಂದಿಷ್ಟು ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಆದರೆ, ಸುನೀಲ್ ಹಣ ಕೊಟ್ಟಿಲ್ಲ. ಬಳಿಕ ಇಬ್ಬರೂ ಕ್ಯಾತಸಂದ್ರ ಸರ್ಕಲ್ ಬಳಿ ಗಲಾಟೆ ಮಾಡಿಕೊಂಡಿದ್ದಾರೆ. ಆ ನಂತರ ರೈಲ್ವೆ ನಿಲ್ದಾಣ ಸಮೀಪ ಬಂದಿದ್ದಾರೆ. ಈ ವೇಳೆ ಇಬ್ಬರ ಜಗಳ ತಾರಕಕ್ಕೆರಿದ್ದು, ಅದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಸುನೀಲ್, ಕುಮಾರಸ್ವಾಮಿ ಮುಖಕ್ಕೆ ಗುದ್ದಿದ್ದು, ಆತ ಫ್ಲಾಟ್‌ಫಾರಂನಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕುಮಾರಸ್ವಾಮಿ ಮುಖಕ್ಕೆ ಚಪ್ಪಲಿ ಕಾಲಿನಿಂದ ಹಲವು ಬಾರಿ ತುಳಿದು, ಕೈಯಲ್ಲಿದ್ದ ಸ್ಟೀಲ್ ಕಡಗದಿಂದ ಹಲವಾರು ಬಾರಿ ಗುದ್ದಿ ಕೊಲೆಗೈದಿದ್ದª. ಈ ಸಂಬಂಧ ರೈಲ್ವೆ ಪೊಲೀಸರು ತನಿಖೆ ನಡೆಸಿದಾಗ ಮೃತನ ಜೇಬಿನಲ್ಲಿ ಪತ್ತೆಯಾದ ಚೀಟಿಯಲ್ಲಿನ ಮೊಬೈಲ್ ನಂಬರ್ ಆಧರಿಸಿ ತನಿಖೆ ನಡೆಸಿದಾಗ ಮೃತನ ಗುರುತು ಪತ್ತೆಯಾಗಿದ್ದು, ಬಳಿಕ ಎಲ್ಲೆಡೆಯ ಸಿಸಿ ಕ್ಯಾಮೆರಾ ಶೋಧಿಸಿದಾಗ ಆರೋಪಿಯ ಸುಳಿವು ಸಿಕ್ಕಿ ಬಂಧಿಸಲಾಗಿದೆ ಎಂದು ರೈಲ್ವೆ ಎಸ್ಪಿ ಡಾ ಸೌಮ್ಯಲತಾ ಮಾಹಿತಿ ನೀಡಿದರು.