ಬೆಂಗಳೂರು: ಮನೆ ಮುಂದೆಯೇ ಸ್ನೇಹಿತನ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದ ಐವರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯಪುರ ನಿವಾಸಿಗಳಾದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ್, ವೆಂಕಟೇಶ್, ಪ್ರಶಾಂತ್ ಮತ್ತು ದರ್ಶನ್ ಅಲಿಯಾಸ್ ಗುಂಡ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಜ.24ರಂದು ನಸುಕಿನ 2.30ರಲ್ಲಿ ರಮೇಶ್ ಎಂಬಾತನ ಮನೆ ಮುಂಭಾಗವೇ ದರ್ಶನ್ ಎಂಬ ಯುವಕ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತುಹಾಕಿ ಹತ್ಯೆಗೈದು ಪರಾರಿಯಾಗಿದ್ದರು. ಆರೋಪಿಗಳ ಪೈಕಿ ಯಶವಂತ್ ಡೆಲಿವರಿ ಬಾಯ್ ಆಗಿದ್ದು, ಚಂದ್ರಶೇಖರ್ ಅಲಿಯಾಸ್ ಪ್ರೀತಂ ಮತ್ತು ವೆಂಕಟೇಶ್ ಆಟೋ ಚಾಲಕರಾಗಿದ್ದಾರೆ. ಪ್ರಶಾಂತ್ ಹಾಗೂ ದರ್ಶನ್ ಅಲಿಯಾಸ್ ಗುಂಡ ಫ್ಲಂಬರ್ ಕೆಲಸ ಮಾಡಿಕೊಂಡಿದ್ದಾರೆ. ಆರೋಪಿಗಳು ಹಾಗೂ ಕೊಲೆಯಾದ ದರ್ಶನ್ ಸ್ನೇಹಿತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ದೊಡ್ಡಮ್ಮ ಕೊಟ್ಟ ದುಡ್ಡಲ್ಲಿ ಪಾರ್ಟಿ!: ಮನೆಗೆ ರೇಷನ್ ಸೇರಿ ವಿವಿಧ ವಸ್ತುಗಳ ಖರೀದಿಸಲು ತಾಯಿಗೆ ಕೊಡುವಂತೆ ದರ್ಶನ್ಗೆ ಆತನ ದೊಡ್ಡಮ್ಮ 3 ಸಾವಿರ ರೂ. ಕೊಟ್ಟಿದ್ದರು. ಆದರೆ, ಆತ ತನ್ನ ಸ್ನೇಹಿತರಾದ ರಮೇಶ್, ನಿತಿನ್ ಜತೆ ಬಾರ್ನಲ್ಲಿ ಪಾರ್ಟಿಗೆ ಹೋಗಿದ್ದರು. ಅದೇ ವೇಳೆ ಪ್ರೀತಂ ಮತ್ತು ತಂಡ ಕೂಡ ಬಾರ್ಗೆ ಬಂದಿದೆ. ಆಗ ಕ್ಷುಲ್ಲಕ ವಿಚಾರಕ್ಕೆ ನಿತಿನ್ ಮತ್ತು ಪ್ರೀತಂ ನಡುವೆ ಗಲಾಟೆಯಾಗಿದೆ. ಅದು ವಿಕೋಪಕ್ಕೆ ಹೋದಾಗ, ಬಾರ್ ಸಿಬ್ಬಂದಿ ಜಗಳ ಬಿಡಿಸಿದ್ದಾರೆ. ಆ ಬಳಿಕ ದರ್ಶನ್ ಮತ್ತು ನಿತಿನ್, ಸ್ನೇಹಿತ ರಮೇಶ್ ಮನೆಗೆ ಬಂದು ಪಾರ್ಟಿ ಮುಂದುವರಿಸಿದ್ದಾರೆ. ಆದರೆ, ಗಲಾಟೆಯಿಂದ ಆಕ್ರೋಶಗೊಂಡಿದ್ದ ಪ್ರೀತಂ ಮತ್ತು ತಂಡ ರಮೇಶ್ ಮನೆ ಬಳಿ ಬಂದು ನಿತಿನ್ ಜತೆ ಗಲಾಟೆ ಆರಂಭಿಸಿದೆ. ಅದು ವಿಕೋಪಕ್ಕೆ ಹೋದಾಗ, ಮಧ್ಯ ಪ್ರವೇಶಿಸಿದ ದರ್ಶನ್ ಜಗಳ ಬಿಡಿಸಲು ಮುಂದಾಗಿದ್ದಾನೆ. ಆಗ ಆರೋಪಿ ಪ್ರೀತಂ, “ನಿನ್ನಿಂದಲೇ ಇಷ್ಟೆಲ್ಲಾ ಆಗಿದ್ದು’ ಎಂದು ದರ್ಶನ್ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಪ್ರೀತಂ ಸೇರಿ ಇತರೆ ಆರೋಪಿಗಳು ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ದರ್ಶನ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.