ಬೆಂಗಳೂರು: ಹಾರ್ನ್ ಮಾಡಿ ದಾರಿ ಕೇಳಿದಕ್ಕೆ ಕಾರು ಅಡ್ಡಗಟ್ಟಿ ಚಾಲಕನಿಗೆ ಧಮ್ಕಿ ಹಾಕಿದಲ್ಲದೆ ಗಾಜುಗಳನ್ನು ಧ್ವಂಸಗೊಳಿಸಿದ ಮೂವರು ಕಿಡಿಗೇಡಿ ಗಳನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.
ಸರ್ಜಾಪುರ ಮೂಲದ ರವೀಂದ್ರ (32), ಕೇಶವ(34) ಮತ್ತು ಗಣೇಶ್(36) ಬಂಧಿತರು.
ಆರೋಪಿಗಳು ಜುಲೈ 13ರಂದು ವ್ಯಕ್ತಿಯೊಬ್ಬರು ಕಾರಿನಲ್ಲಿ ವರ್ತೂರು ಮುಖ್ಯರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದರು. ಮುಂದೆ ಮೂರು ಬೈಕ್‌ಗಳಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದರು. ಆಗ ಕಾರು ಚಾಲಕ ದಾರಿ ಬಿಡುವಂತೆ ಹಾರ್ನ್ ಮಾಡಿದ್ದಾರೆ. ಅದರಿಂದ ಕೋಪಗೊಂಡ ಆರೋಪಿಗಳು ಕೆಲ ದೂರ ಹೋದ ಬಳಿಕ ಕಾರನ್ನು ಅಡ್ಡಗಟ್ಟಿದ್ದಾರೆ. ಅಪಾಯದ ಮೂನ್ಸೂಚನೆ ಅರಿತ ಕಾರು ಚಾಲಕ ತಕ್ಷಣವೇ ಕಾರನ್ನು ರಿವರ್ಸ್ ತೆಗೆದು ಕೊಂಡು ತಪ್ಪಿಸಿಕೊಂಡು ಹೋಗಿದ್ದಾರೆ.
ಆದರೆ, ಅಷ್ಟಕ್ಕೆ ಸುಮ್ಮನಾಗದ ಆರೋಪಿ ಗಳು ಕಾರು ಫಾಲೋ ಮಾಡಿಕೊಂಡು ಬಂದು ಗುಂಜೂರು ಬಳಿ ಅಪಾರ್ಟ್‌ಮೆಂಟ್ ಬಳಿ ಗಲಾಟೆ ಮಾಡಿದ್ದಾರೆ. ಅಲ್ಲದೆ, ಕಾರಿನ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದ್ದರು. ಆರೋಪಿಗಳ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಗಾಜು ಧ್ವಂಸಗೊಳಿಸಿದ ದೃಶ್ಯ ಅಪಾರ್ಟ್‌ಮೆಂಟ್‌ನ ಗೇಟ್ ಬಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಟ್ವಿಟರ್ ಮೂಲಕ ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.
ಅಲ್ಲದೇ, ಕಾರಿಗೆ ದಾರಿ ಬಿಡದೆ ಸತಾಯಿಸಿದ್ದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯ ಸಮೇತ ಟ್ವೀಟ್ ಮಾಡ ಲಾಗಿತ್ತು. ಪೂರ್ವ ಬೆಂಗಳೂರು ಹಾಗೂ ಬೆಂ. ನಗರ ಪೊಲೀಸರಿಗೆ ಟ್ಯಾಗ್ ಮಾಡಿರುವ ಟ್ವೀಟ್ ವೈರಲ್ ಆಗಿತ್ತು. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.