ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಯುವಕನೊಬ್ಬ ತನ್ನ ಅತ್ತೆ ಮಗನಿಗೆ ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆಗೈ ದಿರುವ ಘಟನೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಗೋಪಾಲ ಪುರ ನಿವಾಸಿ ಸೋನು ಪಾಷಾ (31) ಕೊಲೆಯಾದವ. ಕೃತ್ಯ ಎಸಗಿದ ಆತನ ಸಂಬಂಧಿ ಫಾರೂಕ್ ಪಾಷಾ(30) ಎಂಬಾತನನ್ನು ಬಂಧಿಸಲಾಗಿದೆ.
ಗೋಪಾಲಪುರ 3ನೇ ಕ್ರಾಸ್ನ ರಾಮಚಂದ್ರಪುರ ನಿವಾಸಿ ಸೋನು ಪಾಷಾ, ಆರ್.ಆರ್.ನಗರದಲ್ಲಿ ಗ್ಯಾರೆಜ್ ನಲ್ಲಿ ಕೆಲಸ ಮಾಡುತ್ತಿದ್ದ. ಶ್ರೀರಾಮಪುರ ನಿವಾಸಿ ಫಾರೂಕ್ ಪಾಷಾ, ಮಲ್ಲೇಶ್ವರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕವಾಗಿ ಇಬ್ಬರು ಪರಸ್ಪರ ನಿಂದಿಸಿಕೊಂಡಿದ್ದರು. ಹೀಗಾಗಿ ಮಂಗಳವಾರ ಮಧ್ಯಾಹ್ನ ರಾಮಚಂದ್ರ ಪುರದಲ್ಲಿರುವ ಸೋನು ಪಾಷಾ ಮನೆಗೆ ಆರೋಪಿ ಮತ್ತು ಆತನ ಪೋಷಕರು ಬಂದಿದ್ದಾರೆ.
ರಾಜಿ-ಸಂಧಾನದ ವೇಳೆಯೂ ಇಬ್ಬರು ಜಗಳ ಮಾಡಿಕೊಂಡಿದ್ದರು. ಅದು ವಿಕೋಪಕ್ಕೆ ಹೋದಾಗ, ಆರೋಪಿ, ಕಬ್ಬಿಣದ ರಾಡ್ ನಿಂದ ಸೋನುಪಾಷಾ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಸೋನು ಪಾಷಾನನ್ನು ಕೂಡಲೇ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು. ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.