ಬೆಂಗಳೂರು: ಪತ್ನಿ ನಡತೆ ಬಗ್ಗೆ ಸಂಶಯಗೊಂಡು ರೌಡಿಶೀಟರ್ ತನ್ನ ಮಕ್ಕಳೆದುರೇ ಪತ್ನಿ ತೊಡೆಗೆ ಚಾಕುವಿನಿಂದ ಇರಿದಿರುವ ಘಟನೆ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಆಡುಗೋಡಿ ಬಜಾರ್ ಸ್ಟ್ರೀಟ್ ನಿವಾಸಿ ದಯಾನಂದ್ ಬಂಧಿತ. ಕೃತ್ಯದಿಂದ ಗಾಯಗೊಂಡಿದ್ದ ಪತ್ನಿ ಪ್ರಿಯಾಂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಹೇಳಿದರು. ಅಶೋಕನಗರ ಠಾಣೆ ರೌಡಿಶೀಟರ್ ದಯಾನಂದ್, ಪ್ರಿಯಾಂಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಆರೋಪಿ ಕೆಲಸವಿಲ್ಲದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೊಲೆ ಯತ್ನ, ಸುಲಿಗೆ ಪ್ರಕರಣಗಳಿವೆ. ಪ್ರಿಯಾಂಕಾ ಮನೆ ಕೆಲಸ ಮಾಡಿಕೊಂಡು, ಮಕ್ಕಳ ಪಾಲನೆ ಮಾಡುತ್ತಿದ್ದು, ಆರೋಪಿ ಪ್ರತಿ ನಿತ್ಯ ಮದ್ಯ ಸೇವಿಸಿ ಪತ್ನಿ ಮೇಲೆ ಹಲ್ಲೆ ನಡೆಸಿ, ಕುಡಿಯಲು ಹಣ ಕಸಿದುಕೊಂಡು ಹೋಗುತ್ತಿದ್ದ. ಕೆಲ ತಿಂಗಳ ಹಿಂದೆ ಅಪರಾಧ ಪ್ರಕರಣ ದಲ್ಲಿ ಜೈಲು ಸೇರಿದ್ದ ದಯಾನಂದ್, 15 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಪತ್ನಿಯ ಮೊಬೈಲ್ ಪಡೆದು ಕೆಲ ನಂಬರ್ ಪರಿಶೀಲಿಸಿ ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಿಯಾ? ಎಂದು ಸಂಶಯಿಸಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದರು.
ಗುಪ್ತಾಂಗಕ್ಕೆ ಇರಿಯಲು ಯತ್ನಿಸಿದ ಆರೋಪಿ : ಭಾನುವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ, ಪತ್ನಿಯ ನಡತೆ ಬಗ್ಗೆ ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಮಕ್ಕಳು ತಡೆಯಲು ಯತ್ನಿಸಿದ್ದಾರೆ. ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ, ಚಾಕುವಿನಿಂದ ಆಕೆಯನ್ನು ವಿವಸ್ತ್ರಗೊಳಿಸಿ ಗುಪ್ತಾಂಗ ಇರಿಯಲು ಯತ್ನಿಸಿದ್ದಾನೆ. ಪ್ರತಿರೋಧ ವ್ಯಕ್ತಪಡಿಸಿದ ಕಾರಣ ತೊಡೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಆಕೆ ಜೋರಾಗಿ ರಕ್ಷಣೆಗೆ ಕೂಗಿಕೊಂಡಿದ್ದು, ಸ್ಥಳೀಯರು ಧಾವಿಸಿದಾಗ ಆರೋಪಿ ಪರಾರಿಯಾಗಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೂಂದೆಡೆ ತಡರಾತ್ರಿಯೇ ಕಾರ್ಯಾಚರಣೆ ನಡೆಸಿದ ಪೊಲೀಸರು ಸೋಮವಾರ ಮುಂಜಾನೆ ಆರೋಪಿಯನ್ನು ಬಂಧಿಸಿದ್ದಾರೆ.