Advertisement

ಕಾಲೇಜಿನ ಮಹಿಳಾ ಶೌಚಾಲಯಕ್ಕೆ ನುಗ್ಗಿ ಅಸಭ್ಯ ವರ್ತನೆ: ಟೆಕಿ ಬಂಧನ

09:46 AM Jan 24, 2023 | Team Udayavani |

ಬೆಂಗಳೂರು: ಖಾಸಗಿ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ನುಗ್ಗಿ ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸಿದ ಟೆಕಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಹನುಮಂತನಗರ ನಿವಾಸಿ ಅಜಯ್‌ ಕುಮಾರ್‌ (39) ಬಂಧಿತ.

ಜ.10ರಂದು ಜಯನಗರದಲ್ಲಿರುವ ಖಾಸಗಿ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ನುಗ್ಗಿದ್ದ ಅಜಯ್‌ ಕುಮಾರ್‌, ಅದೇ ವೇಳೆ ಶೌಚಾಲಯಕ್ಕೆ ಬಂದ ವಿದ್ಯಾರ್ಥಿನಿಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ. ಗಾಬರಿಗೊಂಡ ವಿದ್ಯಾರ್ಥಿನಿ ಜೋರಾಗಿ ಕೂಗುತ್ತಿದ್ದಂತೆ ಆಕೆಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಸ್ಥಳದಿಂದ ಪರಾರಿಯಾಗಿದ್ದ. ಸಹ ವಿದ್ಯಾರ್ಥಿಗಳು ವಿದ್ಯಾರ್ಥಿಯನ್ನು ಹೊರಗಡೆ ಕರೆತಂದಿದ್ದರು. ಈ ವಿಚಾರ ಕುರಿತು ಕಾಲೇಜಿನಲ್ಲಿ ಪ್ರತಿಭಟನೆ ನಡೆದು, ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಾನಸಿಕ ಅಸ್ವಸ್ಥ?: ಅಜಯ್‌ ಕುಮಾರ್‌ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದು, ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ಕೆಲಸ ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಈ ಮಧ್ಯೆ ಕೌಟುಂಬಿಕ ವಿಚಾರವಾಗಿ ಕುಟುಂಬ ಸದಸ್ಯರಿಂದ ಈತ ದೂರವಾಗಿದ್ದಾನೆ. ಬೆಂಗಳೂರಿನಲ್ಲಿ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟನೆ ಮಾಡಲು ಯತ್ನಿಸುತ್ತಿದ್ದ ಎಂಬುದು ಗೊತ್ತಾಗಿದೆ. ಮಾನಸಿಕ ಖನ್ನತೆಗೊಳಗಾಗಿರುವ ಅಜಯ್‌ ಕುಮಾರ್‌ಗೆ ಗ್ಯಾಸ್ಟ್ರೋ ಸಮಸ್ಯೆಯಿದೆ. ಹೀಗಾಗಿ ಯಾವುದೇ ಆಹಾರ ಸೇವಿಸಿದ ಕೂಡಲೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಜ.10ರಂದು ಕಾಲೇಜು ಬಳಿ ತಿಂಡಿ ತಿಂದಿದ್ದ ಅಜಯ್‌ ಕುಮಾರ್‌, ತುರ್ತು ಶೌಚಾಲಯಕ್ಕೆ ಹೋಗಲು ಪಕ್ಕದಲ್ಲೇ ಇದ್ದ ಕಾಲೇಜಿನ ಶೌಚಾಲಯಕ್ಕೆ ಹೋಗಿದ್ದಾನೆ. ಈ ವೇಳೆ ಅಚಾತುರ್ಯ ನಡೆದಿದೆ ಎಂದು ಪೊಲೀಸರು ಹೇಳಿದರು.

ವಿದ್ಯಾರ್ಥಿನಿ ಜತೆ ಅಸಭ್ಯವರ್ತನೆ ತೋರಿದ ಆರೋಪದ ಮೇಲೆ ಕೇಸ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಅಜಯ್‌ ಕುಮಾರ್‌ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ. ಈ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಿ ಖಚಿತ ಪಡಿಸಿಕೊಳ್ಳಬೇಕಿದೆ. ತನಿಖೆ ನಡೆಯುತ್ತಿದೆ. ಕೃಷ್ಣಕಾಂತ್‌, ದಕ್ಷಿಣ ವಿಭಾಗದ ಡಿಸಿಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next