Advertisement

ನೇಪಾಳಿ ಗ್ಯಾಂಗ್‌ 3 ಸದಸ್ಯರ ಬಂಧನ

03:10 PM Jan 10, 2023 | Team Udayavani |

ಬೆಂಗಳೂರು: ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರ ಅಡ್ಡಗಟ್ಟಿ ದರೋಡೆ, ಸುಲಿಗೆಗೆ ಸಂಚು ರೂಪಿಸಿದ ನೇಪಾಳಿ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಹೆಗ್ಗನಹಳ್ಳಿಯ ಭರತ್‌ ದಾಮಿ(40), ಮೇಕ್ರಿ ಸರ್ಕಲ್‌ನ ಮಂಗಲ ಸಿಂಗ್‌(47) ಹಾಗೂ ಹೆಗ್ಗನಹಳ್ಳಿ ನಿವಾಸಿ ಕುಬೇರ್‌ ಬಹದ್ದೂರ್‌ ದಾಮಿ(25) ಬಂಧಿತರು.

ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಡಿ.24ರಂದು ಬಾಣಸವಾಡಿಯ ಫೈರ್‌ ಸ್ಟೇಷನ್‌ ಬಳಿಯ ಖಾಲಿ ಜಾಗದಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕಿದ್ದರು. ಈ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಇತ್ತೀಚೆಗೆ ಬಾಣಸವಾಡಿ ಕಮ್ಮನಹಳ್ಳಿ ಮುಖ್ಯರಸ್ತೆಯ ಚಿನ್ನದ ಅಂಗಡಿಯ ಗೋಡೆ ಕೊರೆದು ಚಿನ್ನಾಭರಣ ಕಳವಿಗೆ ಯತ್ನ ಹಾಗೂ ದರೋಡೆಗೆ ಯತ್ನಕ್ಕೆ ತೊಡಗಿದ್ದರು ಎಂದು ಪೊಲೀಸರು ಹೇಳಿದರು.

ಹತ್ತು ವರ್ಷಗಳ ಹಿಂದೆ ಉದ್ಯೋಗ ಅರಸಿ ನೇಪಾಳದಿಂದ ಬೆಂಗಳೂರಿಗೆ ಬಂದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.ಆರೋಪಿ ಭರತ್‌ ದಾಮಿ ವಿರುದ್ಧ ಈ ಹಿಂದೆ ಬಾಣಸವಾಡಿ, ರಾಜಗೋಪಾಲನಗರ, ಎಚ್‌ಎಸ್‌ಆರ್‌ ಲೇಔಟ್‌, ಮಹಾಲಕ್ಷ್ಮೀ ಲೇಔಟ್‌, ಪೀಣ್ಯ, ಮೈಸೂರಿನ ಕುವೆಂಪುನಗರ ಹಾಗೂ ಸರಸ್ವತಿ ಪುರಂ ಠಾಣೆಯಲ್ಲಿ ಮನೆಗಳವು, ದರೋಡೆ ಸೇರಿ ವಿವಿಧ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದ್ದ ಆರೋಪಿ ಭರತ್‌ ದಾಮಿ, ಜಾಮೀನು ಪಡೆದು ಹೊರಬಂದು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾನೆ.

ಕೆಲ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈತನ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು. ಇನ್ನು ಆರೋಪಿ ಮಂಗಲ್‌ ಸಿಂಗ್‌ ವಿರುದ್ಧವು ಸಂಪಂಗಿರಾಮನಗರ, ಮಾರತಹಳ್ಳಿ ಠಾಣೆ ಹಾಗೂ ರಾಜ್ಯದ ಇತರೆ ಠಾಣೆಗಳಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಈತ ಕೆಲ ಪ್ರಕರಣಗಳಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಹಳೇ ಚಾಳಿ ಮುಂದುವರಿಸಿದ್ದ.

Advertisement

ಕೆಲ ಪ್ರಕರಣಗಳಲ್ಲಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಈತನ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿಯಾಗಿತ್ತು. ಆರೋಪಿ ಕುಬೇರ್‌ ಬಹದ್ದೂರ್‌ ದಾಮಿ ವಿರುದ್ಧ ಈ ಹಿಂದೆ ಜಾಲಹಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆರೋಪಿ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದು ಬಳಿಕ ಜಾಮೀನು ಪಡೆದು ಹೊರಬಂದು ಇತರೆ ಆರೋಪಿಗಳ ಜತೆ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next