ಬೆಂಗಳೂರು: ಇತ್ತೀಚೆಗೆ ನಿರ್ಮಾಣ ಹಂತದ ಕಟ್ಟಡದಶೆಡ್‌ಗೆ ನುಗ್ಗಿ ಬಾಲಕನ ಕೊಂದು ಆಕೆಯ ತಾಯಿಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಜ್ಞಾನಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಗೇಹಳ್ಳಿ ನಿವಾಸಿ ಗಾದಿಲಿಂಗಪ್ಪ(50) ಬಂಧಿತ. ಆರೋಪಿಯಿಂದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಡಿ.16ರಂದು ರಾತ್ರಿ ಆರೋಪಿ 12 ವರ್ಷದ ಬಾಲಕ ರಾಜು ಎಂಬಾತನನ್ನು ಹತ್ಯೆಗೈದುಆತನ ತಾಯಿ ಹನುಮಂತವ್ವ ಎಂಬಾಕೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ. ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಬಸವರಾಜು ಹತ್ತು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಬಸವರಾಜ್‌ಜ್ಞಾನಗಂಗಾ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಸವರಾಜ್ ಕುಟುಂಬ ವಾಸಿಸಲು ಶೆಡ್ ನೀಡಲಾಗಿತ್ತು. ವಾರದ ಹಿಂದೆ ಬಸವರಾಜ್ ಕೆಲಸನಿಮಿತ್ತ ಊರಿಗೆ ತೆರಳಿದ್ದರು, ಆರೋಪಿ ಗಾದಿಲಿಂಗಪ್ಪ ಬಸವರಾಜ್ ಅವರ ಊರಿನ ಪರಿಚಯಸ್ಥನಾದ ಕಾರಣ ಆಗ್ಗಾಗ್ಗೆ ಶೆಡ್‌ಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ಹೇಳಿದರು.
ಪರಿಚಯಸ್ಥ ಬಸವರಾಜ್ ಊರಿಗೆ ಹೋಗಿರುವ ವಿಚಾರ ಗೊತ್ತಿದ್ದ ಆರೋಪಿ, ಡಿ.16ರಂದು ರಾತ್ರಿ 11 ಗಂಟೆ ಸುಮಾರಿಗೆ ಬಸವರಾಜ್ ಶೆಡ್‌ಗೆ ಬಂದಿದ್ದು, ಅವರ ಪತ್ನಿ ಜತೆ ಮಾತನಾಡಿ ಬಳಿಕ ಚಿನ್ನಾಭರಣ ನೀಡುವಂತೆ ಕೇಳಿದ್ದ. ಆಗ ಮಹಿಳೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಆಕೆಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದ.ಇದರಿಂದ ಪ್ರಜ್ಞೆ ಕಳೆದುಕೊಂಡು ಆಕೆ ಕೆಳಗೆ ಬಿದ್ದಿದ್ದು ಮೃತಪಟ್ಟಿರಬಹುದು ಎಂದುಕೊಂಡಿದ್ದ ಆರೋಪಿ, ಅಲ್ಲಿಯೇ ಇದ್ದ ಪುತ್ರ ಈ ವಿಚಾರ ತಿಳಿಸುತ್ತಾನೆ ಎಂದು ಭಾವಿಸಿ 12 ವರ್ಷದ ಬಾಲಕನಿಗೆ ಇಟ್ಟಿಗೆಯಿಂದ ತಲೆಗೆ ಹೊಡೆದು ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಮಹಿಳೆ ಮಾರಣಾಂತಿಕ ಹಲ್ಲೆಗೊಳಗಾಗಿ ಅಸ್ವಸ್ಥಗೊಂಡಿದ್ದರು. ಬಳಿಕ ಮನೆಯಲ್ಲಿದ್ದ 40 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಮರು ದಿನ ಎರಡು ವರ್ಷದ ಮಗು ಶೆಡ್‌ನಿಂದ ಹೊರಗಡೆ ಬಂದು ಅಳುತ್ತಿತ್ತು. ಆಗ ಸ್ಥಳೀಯರು ಶೆಡ್‌ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಶೆಡ್‌ನಲ್ಲೇ ಗುಂಡಿ ತೆಗೆದು ಚಿನ್ನಾಭರಣ ಮುಚ್ಚಿದ್ದ : ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಇನ್ ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ನೇತೃತ್ವದ ತಂಡ, ಆರೋಪಿಯನ್ನು ಮೊದಲಿಗೆ ವಿಚಾರಣೆ ನಡೆಸಿ ದಾಗ ತನಗೆ ಯಾವುದೇ ವಿಚಾರ ಗೊತ್ತಿಲ್ಲದ್ದಂತೆ ನಟಿಸಿದ್ದಾನೆ. ಬಳಿಕ ಶೆಡ್‌ನಲ್ಲಿ ಗುಂಡಿ ತೆಗೆದು ಚಿನ್ನಾಭರಣ ಮುಚ್ಚಿರುವ ಗುರುತು ಪತ್ತೆಯಾಗಿತ್ತು.ಅದನ್ನು ಪರಿಶೀಲಿಸಿದಾಗ ಕೆಲವೊಂದು ಸಾಕ್ಷ್ಯ ಸಿಕ್ಕತ್ತು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.