ಬೆಂಗಳೂರು: ಬಾಡಿಗೆ ಹಣದ ವಿಚಾರಕ್ಕೆ ಹೋಟೆಲ್ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿದ್ದ ವಿದೇಶಿ ಪ್ರಜೆಗೆ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಮಾರ್ಗ ಮಧ್ಯೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿ ದರೋಡೆ ಮಾಡಿರುವ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಶಿವಾಜಿನಗರ ನಿವಾಸಿ ಸೈಯದ್ ಇಮ್ರಾನ್ (35) ಬಂಧಿತ. ಇತರೆ ಮೂವರಿಗಾಗಿ ಶೋಧ ನಡೆಯುತ್ತಿದೆ.
ಆಸ್ಟ್ರೇಲಿಯಾ ಮೂಲದ ಅಸೋ ಹ್ಯಾಂಜಿಹಿ ತನ್ನ ದೇಶದಲ್ಲಿ 2 ಕಂಪನಿಗಳ ಸಿಇಓ ಆಗಿದ್ದು, ಬೆಂಗಳೂರಿನಲ್ಲೂ ಶಾಖೆ ತೆರೆಯಲು ಮೇ 23ರಂದು ಬೆಂಗಳೂರಿಗೆ ಬಂದಿದ್ದು, ಮಾನ್ಯತಾ ಟೆಕ್ ಪಾರ್ಕ್ ಬಳಿಯ ಹೋಟೆಲ್ ವೊಂದರಲ್ಲಿ ತಂಗಿದ್ದರು. ಮಾನ್ಯತಾ ಟೆಕ್ ಪಾರ್ಕ್ ಮತ್ತು ಶಿವಾಜಿನಗರದಲ್ಲಿ ತಮ್ಮ ಸಂಸ್ಥೆ ವಿ-ವರ್ಕ್ ಎಂಬ ಸಂಸ್ಥೆಯ ಶಾಖೆಗಳನ್ನು ತೆರೆಯಲು ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರು. ಸ್ಥಳೀಯ ಬ್ಯಾಂಕ್‌ನಲ್ಲಿ ದಾಖಲೆ ನೀಡಿ ಖಾತೆ ತೆರೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ಖಾತೆ ತೆರೆ ಯಲಾಗಿಲ್ಲ. ಜತೆಗೆ ವಿದೇಶಿ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ವಿನಿಮಯಕ್ಕೂ ಯತ್ನಿಸಿದ್ದಾರೆ. ಅದು ಸಾಧ್ಯವಾಗಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಬಾಡಿಗೆ ವಿಚಾರಕ್ಕೆ ಗಲಾಟೆ, ಹಲ್ಲೆ: ಈ ಮಧ್ಯೆ ಜೂನ್ 23ರಂದು ತಡರಾತ್ರಿ 2.30ರ ಸುಮಾರಿಗೆ ಹೋಟೆಲ್‌ಗೆ ಬಂದ ಅಸೋನನ್ನು ಹೋಟೆಲ್ ಸಿಬ್ಬಂದಿ ಬಾಡಿಗೆ ಕೇಳಿ ದ್ದಾರೆ. ಆಗ ಆನ್‌ಲೈನ್ ಮೂಲಕ ವರ್ಗಾವಣೆ ಮಾಡುತ್ತೇನೆ ಎಂದಾಗ ಹೋಟೆಲ್ ಮ್ಯಾನೇಜರ್, ಅಸೋ ಜತೆ ವಾಗ್ವಾದ ನಡೆಸಿ, ಕ್ಯಾಶ್ ಕಟ್ಟಬೇಕು. ಆನ್‌ಲೈನ್‌ಗೆ ಅವಕಾಶವಿಲ್ಲ ಎಂದಿದ್ದಾರೆ. ಅದೇ ವಿಚಾರಕ್ಕೆ ಹೋಟೆಲ್‌ನ ಐದಾರು ಮಂದಿ ಸಿಬ್ಬಂದಿ ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿ ಹೋಟೆಲ್‌ನಿಂದ ಹೊರ ಹಾಕಿದ್ದಾರೆ. ಅದೇ ಹೋಟೆಲ್‌ನಲ್ಲಿ ವಾಸವಾಗಿದ್ದ ಸೈಯದ್ ಇಮ್ರಾನ್ ಹಾಗೂ ಇತರೆ ಆರೋಪಿಗಳು, ಅಸೋಗೆ ಸಹಾಯ ಮಾಡುವುದಾಗಿ ಬಂದಿದ್ದಾರೆ.
ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹಲ್ಲೆ: ಲಗೇಜ್ ಸಮೇತ ಹೋಟೆಲ್ ಹೊರಗಡೆ ನಿಂತಿದ್ದ ಅಸೋಗೆ ನಾಲ್ವರು ಆರೋಪಿಗಳು ಪೊಲೀಸ್ ಠಾಣೆಗೆ ಕರೆ ದೊಯ್ಯುವುದಾಗಿ ದ್ವಿಚಕ್ರ ವಾಹನದಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಹೋಗಿದ್ದಾರೆ. ಮಾರ್ಗ ಮಧ್ಯೆ ವಾಹನ ನಿಲ್ಲಿಸಿ ಚಾಕು ತೋರಿಸಿ, ಅಸೋ ಬಳಿಯಿದ್ದ ಮೂರು ಬ್ಯಾಗ್‌ಗಳ ಪೈಕಿ ಒಂದು ಬ್ಯಾಗ್, ಪಾಸ್ ಪೋರ್ಟ್, ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು, 4 ಸಾವಿರ ರೂ. ನಗದು ಹಾಗೂ ಇತರೆ ದಾಖಲೆಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಅಸೋ, ಕಲ್ಲುಗಳಿಂದ ಆರೋಪಿಗಳ ಮೇಲೆ ಎಸೆದು, ತಪ್ಪಿಸಿಕೊಂಡು ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಹೋಟೆಲ್ ಸಿಬ್ಬಂದಿ ವಿಚಾರಿಸಿ, ಸಿಸಿ ಕ್ಯಾಮೆರಾ ಹಾಗೂ ಹೇಳಿಕೆ ಸಂಗ್ರಹಿಸಿದ್ದಾರೆ.
ಬಳಿಕ ಗೋವಿಂದಪುರ ಠಾಣೆಯಲ್ಲಿ ಹೋಟೆಲ್ ಸಿಬ್ಬಂದಿ ಮತ್ತು ದರೋಡೆಕೋರರ ವಿರುದ್ಧ ಪ್ರಕರಣ ದಾಖಲಿಸಿದ್ದು, ನಾಲ್ವರು ದರೋಡೆಕೋರರ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಹೋಟೆಲ್ ಮ್ಯಾನೇಜರ್‌ಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗಿದೆ. ಹಲ್ಲೆ ನಡೆಸಿದ ಸಿಬ್ಬಂದಿಯನ್ನು ಠಾಣೆಗೆ ಒಪ್ಪಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಾಡಿಗೆ ವಿಚಾರಕ್ಕೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಜತೆಗೆ ಸಹಾಯ ನೆಪದಲ್ಲಿ ನಾಲ್ವರು ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಸದ್ಯದಲ್ಲೇ ಹೋಟೆಲ್ ಸಿಬ್ಬಂದಿಯನ್ನು ಬಂಧಿಸಲಾಗುತ್ತದೆ.
– ಭೀಮಾಶಂಕರ್ ಗುಳೇದ್, ಪೂರ್ವ ವಿಭಾಗ ಡಿಸಿಪಿ