ಬೆಂಗಳೂರು: ದೇಶದ ವಿವಿಧ ಭಾಗದಲ್ಲಿರುವ ನಾಗರಿಕರಿಗೆ ಕರೆ ಮಾಡಿ ಉದ್ಯೋಗ, ಸಾಲ ಕೊಡಿಸುವುದಾಗಿ ಹಾಗೂ ಲಾಟರಿ, ಗಿಫ್ಟ್ ಬಂದಿರುವುದಾಗಿ ನಂಬಿಸಿ ನಕಲಿ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮುಖಾಂತರ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದ ಆಫ್ರಿಕಾ ಮೂಲದ ಇಬ್ಬರು ಸೇರಿ ಒಟ್ಟಾರೆ ಮೂವರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಫ್ರಿಕಾ ಪ್ರಜೆಗಳಾದ ಫಾಸೋಯಿನ್ ಅವಲೋಹೋ ಅಡೇ ಯಿಂಕಾ (32), ಅಡ್ವೇ ಅಂಗೇ ಅಲ್ಪೇಡ್ ಅಡೋನಿ ಮತ್ತು ತ್ರಿಪುರದ ಮೋನಿಕುಮಾರ್ ಕಾಯ್‌ಪೇಂಗ್ ಅವರನ್ನು ಬಂಧಿಸಲಾಗಿದೆ.
ಅನಧಿಕೃತ ವಾಸ: ಆರೋಪಿಗಳು ಪಾಸ್‌ಪೋರ್ಟ್ ಹಾಗೂ ವೀಸಾ ಪಡೆಯದೆ ಭಾರತದಲ್ಲಿ ಅನಧಿಕೃತವಾಗಿ ವಾಸವಾಗಿದ್ದರು. ಸೈಬರ್ ಅಪರಾಧ ಮಾಡುವ ಉದ್ದೇಶದಿಂದಲೇ ತ್ರಿಪುರ ರಾಜ್ಯದಿಂದ ನಕಲಿ ಸಿಮ್‌ಕಾರ್ಡ್‌ಗಳನ್ನು ಮತ್ತು ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿಕೊಂಡು ವಂಚಿಸುತ್ತಿದ್ದರು ಎಂಬ ಮಾಹಿತಿ ಸಿಇಎನ್ ಠಾಣೆ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಬಂಧಿಸಿ ಶೋಧ ನಡೆಸಿ ಅವರ ಬಳಿ ಇದ್ದ 4 ನಕಲಿ ಡೆಬಿಟ್ ಕಾರ್ಡ್‌ಗಳು ಹಾಗೂ 4 ಸಿಮ್ ಕಾರ್ಡ್‌ಗಳು ಹಾಗೂ 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ತ್ರಿಪುರ ರಾಜ್ಯದಿಂದ ಕೊರಿಯರ್‌ನಲ್ಲಿ ಬರುತ್ತಿದ್ದ ಮತ್ತೆರಡು ಪಾರ್ಸಲ್ ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಕೊರಿಯರ್ ಕಚೇರಿಯಿಂದ ಎರಡು ಪಾರ್ಸಲ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರಲ್ಲಿ 6 ಡೆಬಿಟ್ ಕಾರ್ಡ್ ಗಳು ಹಾಗೂ 2 ನಕಲಿ ಸಿಮ್ ಕಾರ್ಡ್ ಪತ್ತೆಯಾಗಿವೆ. ಈ ಕುರಿತು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಉದ್ಯೋಗ, ಲೋನ್ ಕೊಡಿಸುವುದಾಗಿ ಮತ್ತು ಗಿಫ್ಟ್ ಬಂದಿರುವುದಾಗಿ ವಿವಿಧ ರೀತಿಯಲ್ಲಿ ದೂರವಾಣಿ ಕರೆ ಮಾಡಿ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದು ಗೊತ್ತಾಗಿದೆ.
ನಂತರ ಸಾರ್ವಜನಿಕರಿಂದ ನಕಲಿ ಬ್ಯಾಂಕ್ ಖಾತೆಗಳಗೆ ಆನ್ ಲೈನ್ ಮುಖಾಂತರ ಹಣ ಹಾಕಿಸಿಕೊಂಡು ಮೋಸ ಮಾಡಿ ಪರಾ ರಿಯಾಗುತ್ತಿದ್ದರು. ಇದರಿಂದಾಗಿ ಆರೋಪಿಗಳನ್ನು ಪತ್ತೆ ಮಾಡಲು ಹಾಗೂ ಬಂಧಿಸಲು ಪೊಲೀಸರಿಗೆ ಕಷ್ಟವಾಗಿತ್ತು. ಆರೋಪಿಗಳ ವಿಳಾಸದ ಬಗ್ಗೆ ವಿಚಾರಿಸಿದಾಗ ವಾಸಸ್ಥಳದ ವಿಳಾಸ ತಿಳಿಸಿಲ್ಲ. ಈಶಾನ್ಯ ವಿಭಾಗದ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ರಾಮ್, ಪಿಎಸ್‌ಐ ಗಳಾದ ದೀಪಕ್, ರಮೇಶ್ ಅವರನ್ನು ಒಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ನಕಲಿ ಸಿಮ್ ಕಾರ್ಡ್ ರವಾನೆ : ನಗರದಲ್ಲಿ ವಾಸವಾಗಿರುವ ಆಫ್ರಿಕಾ ಮೂಲದ ವ್ಯಕ್ತಿಗಳಿಗೆ ಸಿಮ್ ಕಾರ್ಡ್‌ಗಳನ್ನು ರವಾನಿಸಿ ಹಣ ಸಂಪಾದಿಸುತ್ತಿದ್ದ ತ್ರಿಪುರ ರಾಜ್ಯದ ಮೋನಿಕುಮಾರ್‌ನನ್ನು ಬಂಧಿಸಿ 5 ನಕಲಿ ಸಿಮ್ ಕಾರ್ಡ್‌ಗಳು ಹಾಗೂ 6 ಬ್ಯಾಂಕ್ ನಕಲಿ ಡೆಬಿಟ್ ಕಾರ್ಡ್ ಹಾಗೂ 4 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಬಂಧಿತನಾಗಿರುವ ಆಫ್ರಿಕಾ ಖಂಡದ ಘಾನಾ ದೇಶದ ಪ್ರಜೆಗಳನ್ನು ವಿಚಾರಣೆಗೆ ಒಳಪಡಿಸಿದಾಗ ತ್ರಿಪುರ ರಾಜ್ಯದ ಈ ವ್ಯಕ್ತಿ ಬಗ್ಗೆ ಮಾಹಿತಿ ನೀಡಿದ್ದ.ಈತ ಸೈಬರ್ ಅಪರಾಧ ಕೃತ್ಯಗಳಿಗೆ ಸಹಕರಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಡಿಸಿಪಿ ಅನೂಪ್ ಶೆಟ್ಟಿ ಅವರು ಒಂದು ತಂಡವನ್ನು ರಚಿಸಿದ್ದರು. ಈ ತಂಡ ತ್ರಿಪುರ ರಾಜ್ಯಕ್ಕೆ ತೆರಳಿ ಆರೋಪಿ ಮೋನಿಕುಮಾರ್ ಬಗ್ಗೆ ಮಾಹಿತಿ ಕಲೆ ಆಕಿ ಅಗರ್ತಲಾ ನಗರದಲ್ಲಿ ಪತ್ತೆ ಹಚ್ಚಿ ಬಂಧಿಸಿ ನಗರಕ್ಕೆಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ತ್ರಿಪುರದಲ್ಲಿ ವಾಸಿಸುವ ಬುಡಕಟ್ಟು ಸಮಾಜದವರಿಗೆ 2ರಿಂದ 3 ಸಾವಿರ ರೂ. ನೀಡಿ ಅವರಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ ಮತ್ತು ಸಿಮ್ ಕಾರ್ಡ್‌ಗಳನ್ನು ಖರೀದಿಸಿರುವುದು ತಿಳಿದು ಬಂದಿದೆ. ಈ ಸಿಮ್ ಕಾರ್ಡ್‌ಗಳನ್ನು ನಗರದಲ್ಲಿ ವಾಸಿಸುವ ಆಫ್ರಿಕಾ ಮೂಲದ ವ್ಯಕ್ತಿಗಳಿಗೆ ರವಾನಿಸಿ ಹಣ ಸಂಪಾದಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.