ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಶ್ರೀಮಂತರಿಗೆ ತಾಯಿಗೆ ಅನಾರೋಗ್ಯ ನೆಪವೊಡ್ಡಿ ಕಾರು ಪಡೆದು ಪರಾರಿಯಾಗುತ್ತಿದ್ದ ಆರೋಪಿಯೊಬ್ಬ ಎಚ್‌ಎಎಲ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಜೆ.ಬಿ.ನಗರ ನಿವಾಸಿ ಚರಣ್ ರಾಜ್ (33) ಬಂಧಿತ. ಆರೋಪಿಯಿಂದ 1 ಬೆನ್ಜ್ ಕಾರು ಸೇರಿ 8 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕನಕಪುರ ಮೂಲದ ಅರೋಪಿ ಚರಣ್ ರಾಜ್ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಂತರ ಒಬ್ಬಂಟಿಯಾಗಿರುವ ಆರೋಪಿ ಫೇಸ್‌ಬುಕ್‌ನಲ್ಲಿ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದವರ ಜತೆ 1 ತಿಂಗಳು ನಿರಂತರವಾಗಿ ಮೆಸೆಂಜರ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದ. ನಂತರ ತನ್ನ ತಾಯಿಗೆ ಅನಾರೋಗ್ಯ ಉಂಟಾಗಿದ್ದು, ತುರ್ತಾಗಿ ಕಾರು ಬೇಕಿದೆ. 1 ದಿನದಲ್ಲಿ ಕಾರನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿ ಕೊಂಡೊಯ್ಯುತ್ತಿದ್ದ. 2-3 ದಿನಗಳಾದರೂ ಆರೋಪಿ ಕಾರು ವಾಪಸ್ ನೀಡುತ್ತಿರಲಿಲ್ಲ. ನಂತರ ತಲೆಮರೆಸಿಕೊಳ್ಳುತ್ತಿದ್ದ. ಪಡೆದುಕೊಂಡಿದ್ದ ಕಾರನ್ನು ಕಡಿಮೆ ಬೆಲೆಗೆ, ಮತ್ತೂಮ್ಮೆ ದಾಖಲೆಗಳನ್ನು ನೀಡುವುದಾಗಿ ಮಾರಾಟ ಮಾಡುತ್ತಿದ್ದ. ಬಳಿಕ ಸಿಮ್ ಕಾರ್ಡ್ ಅನ್ನು ಬದಲಾಯಿಸುತ್ತಿದ್ದ. ಕೆಲವೊಮ್ಮೆ ತುರ್ತು ಹಣದ ಅಗತ್ಯವಿದೆ ಎಂದು ಕಾರನ್ನು ಅಡಮಾನ ಇಡುತ್ತಿದ್ದ. ಕೆಲ ದಿನಗಳ ಬಳಿಕ ಕಾರಿನ ಮಾಲೀಕರು ಹಾಗೂ ಕಾರನ್ನು ಅಡ ಇರಿಸಿಕೊಂಡು ಹಣ ಕೊಟ್ಟವರು ಆತನಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಕೆಲ ದಿನಗಳ ಬಳಿಕ ಹೊಸ ಸಿಮ್‌ಕಾರ್ಡ್ ಬಳಸಿ ಮತ್ತೆ ವಂಚನೆಗಿಳಿಯುತ್ತಿದ್ದ. ಇತ್ತೀಚೆಗೆ ಆರೋಪಿ ಚರಣ್‌ರಾಜ್ ವಿಮಾನಪುರ ನಿವಾಸಿ ಉದ್ಯಮಿ ಅರುಣ್ ದಾಸ್ ಅವರನ್ನು ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡಿದ್ದ. ಮಾ.26ರಂದು ತಾಯಿಗೆ ಅನಾರೋಗ್ಯವಾಗಿದ್ದು, ಆಸ್ಪತ್ರೆಗೆ ಸೇರಿಸಬೇಕು. ನಿಮ್ಮ ಕಾರು ಕೊಡಿ ಎಂದು ಮಾ.27ರಂದು ಎರ್ಟಿಗಾ ಕಾರನ್ನು ತೆಗೆದು ಕೊಂಡು ಹೋಗಿ ಪರಾರಿಯಾಗಿದ್ದ. ಈ ಬಗ್ಗೆ ಅರುಣ್ ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕನಕಪುರದಲ್ಲಿರುವ ಆರೋಪಿ ಚರಣ್‌ರಾಜ್ ನಿವಾಸದಲ್ಲಿ ಆತನನ್ನು ಬಂಧಿಸಿದ್ದಾರೆ.
ಒಎಲ್‌ಎಕ್ಸ್‌ನಲ್ಲೂ ಕಾರು ಪಡೆದು ವಂಚಿಸಿದ್ದ :
ಒಎಲ್‌ಎಕ್ಸ್‌ನಲ್ಲಿ ಬಾಡಿಗೆಗೆ ಕಾರು ಮಾರಾಟ ಮಾಡುವುದಾಗಿ ಜಾಹೀರಾತು ಹಾಕುವವರನ್ನು ಸಂಪರ್ಕಿಸಿ ಕಾರು ಪಡೆಯುತ್ತಿದ್ದ. ಈಕಾರುಗಳನ್ನೂ ಅಡ ಇಟ್ಟು ಪರಾರಿಯಾಗುತ್ತಿದ್ದ. ಇದೇ ಮಾದರಿಯಲ್ಲಿ 8 ಮಂದಿಗೆ ವಂಚನೆ ಎಸಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬಂದ ಹಣ ದಲ್ಲಿಮೋಜು-ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.