ಬೆಂಗಳೂರು: ಸಿ.ಟಿ. ಮಾರುಕಟ್ಟೆಯ ಮೆಟ್ರೋ ನಿಲ್ದಾಣದ ಎ ಗೇಟ್ ಹಿಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಪಶ್ಚಿಮ ವಿಭಾಗದ ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ರಾಜುರಾಮ್ ಬಿಷ್ಣೋಯ್ (31) ಮತ್ತು ಸುನೀಲ್ ಕುಮಾರ್ (21) ಬಂಧಿತರು. ಅವರಿಂದ 3.3 ಕೋಟಿ ರೂ. ಮೌಲ್ಯದ 1.280 ಗ್ರಾಂ ಬ್ರೌನ್ ಶುಗರ್, 475 ಗ್ರಾಂ ಅಫೀಮು, 25 ಎಲ್‌ಎಸ್‌ಡಿ ಸ್ಟ್ರೀಪ್ಸ್‌ಗಳು, 32 ಗ್ರಾಂ ತೂಕದ ಎಂಡಿಎಂಎ ಮಾತ್ರಗಳು, 3 ಮೂಬೈಲ್‌ಗಳು, ಎರಡು ಬೈಕ್, ಮೂರು ತೂಕದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಮೆಟ್ರೋ ನಿಲ್ದಾಣ ಎ ಗೇಟ್ ಬಳಿ ಬಟ್ಟೆ ಬ್ಯಾಗ್ ಇಟ್ಟುಕೊಂಡು ಆರೋಪಿಗಳು ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದರು. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಬ್ಯಾಗ್‌ನ ಒಳಭಾಗದ ಮತ್ತೂಂದು ಬ್ಯಾಗ್‌ನಲ್ಲಿ ಮಾದಕ ವಸ್ತು ಕಂಡು ಬಂದಿವೆ. ಈ ವೇಳೆ ಅಫೀಮು, ಎಂಡಿಎಂಎ, ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ.
ಆ ನಂತರ ಮಾಗಡಿ ರಸ್ತೆಯ ರಾಜುರಾಮ್ ಬಿಷ್ಣೋಯ್ ಮನೆ ಮತ್ತು ಕುಂಬಳ ಗೋಡುನಲ್ಲಿರುವ ಸುನೀಲ್‌ಕುಮಾರ್ ಮನೆ ತಪಾಸಣೆ ನಡೆಸಿದಾಗ ಅಲ್ಲಿಯೂ ಮಾದಕ ವಸ್ತು ಪತ್ತೆಯಾಗಿದ್ದು, ಒಟ್ಟಾರೆ ವಶಕ್ಕೆ ಪಡೆದ ಮಾದಕ ವಸ್ತುವಿನ ಮೌಲ್ಯ 3.30 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.
42 ಪ್ರಕರಣ ದಾಖಲು, 61ಮಂದಿ ಬಂಧನ : ಡ್ರಗ್ಸ್ ದಂಧೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಿಭಾಗ ಪೊಲೀಸರು ಸೆ.1ರಿಂದ ಸೆ.22ರವರೆಗೆ 42 ಡ್ರಗ್ಸ್ ಪ್ರಕರಣಗಳನ್ನು ದಾಖಲಿಸಿದ್ದು, 61 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಗಳಲ್ಲಿ 51.555 ಕೆ.ಜಿ. ಗಾಂಜಾ, 600 ಅಫೀಮು, 90 ಗ್ರಾಂ ಬ್ರೌನ್‌ಶುಗರ್ ಹಾಗೂ 70 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಮಾದಕ ವಸ್ತು ಸೇವನೆ ಮಾಡುತ್ತಿರುವವರ ವಿರುದ್ಧವೂ ಇದುವರೆಗೂ 121 ಪ್ರಕರಣ ದಾಖಲಿಸುತ್ತಿದ್ದು, 121 ಮಂದಿ ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಎಂ.ಪಾಟೀಲ್ ಹೇಳಿದರು.