ಉಡುಪಿ: ಮಣಿಪಾಲದ ಕೆಎಂಸಿ ಮತ್ತು ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ(ಎಂಸಿಸಿಸಿ)ಕ್ಕೆ ಯುರೋಪಿಯನ್ ಸೊಸೈಟಿ ಆಫ್ ಮೆಡಿಕಲ್ ಓಂಕಾಲಜಿ (ಇಎಎಸ್‌ಎಂಒ) ವತಿಯಿಂದ ಎಸ್ಮೋ ಓಂಕಾಲಜಿ ಮತ್ತು ಪ್ರಶಾಮಕ ಆರೈಕೆಯ ಕೇಂದ್ರವಾಗಿ ಮಾನ್ಯತೆ ಲಭಿಸಿದೆ.
ವೈದ್ಯಕೀಯ ಓಂಕಾಲಜಿ ವಿಭಾಗದ ಮುಖ್ಯಸ್ಥ ಡಾ| ಕಾರ್ತಿಕ ಉಡುಪ ಅವರು ಸೆ. 29ರಂದು ಸ್ಪೈನ್‌ನ ಬಾರ್ಸಿಲೋನಾದ ಎಸ್ಮೋ 2019ರ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪಡೆದರು.
ಮಾನ್ಯತೆಯು 2020ರ ಜನವರಿಯಿಂದ 2022ರ ಡಿಸೆಂಬರ್ ವರೆಗೆ ಮೂರು ವರ್ಷಗಳ ಅವಧಿಗೆ ಇರುತ್ತದೆ. ಜಗತ್ತಿನಾದ್ಯಂತ ಅಗ್ರ 21 ಕ್ಯಾನ್ಸರ್ ಕೇಂದ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಕೇವಲ ಎರಡು ಕ್ಯಾನ್ಸರ್ ಕೇಂದ್ರಗಳು ಭಾರತದಿಂದ ಆಯ್ಕೆಯಾಗಿವೆ ಮತ್ತು ಅವುಗಳಲ್ಲಿ ಮಣಿಪಾಲ ಒಂದಾಗಿದೆ.
ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಹೆಚ್ಚು ತರಬೇತಿ ಪಡೆದ ಮತ್ತು ನುರಿತ ಕ್ಯಾನ್ಸರ್ ತಜ್ಞರ ತಂಡವು ನೀಡುವ ಸಮಗ್ರ ಕ್ಯಾನ್ಸರ್ ಸೇವೆಗಳಿಂದಾಗಿ ಸಿಕ್ಕಿದ ಒಂದು ದೊಡ್ಡ ಗೌರವ ಮತ್ತು ಅಪರೂಪದ ಸಾಧನೆಯಾಗಿದೆ. ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವು ವೈದ್ಯಕೀಯ ಓಂಕಾಲಜಿ, ಶಸ್ತ್ರಚಿಕಿತ್ಸಾ ಓಂಕಾಲಜಿ, ವಿಕಿರಣಶಾಸ್ತ್ರ ಓಂಕಾಲಜಿ, ಮಕ್ಕಳ ಓಂಕಾಲಜಿ, ಪ್ರಶಾಮಕ ವಿಭಾಗ ಮತ್ತು
ನ್ಯೂಕ್ಲಿಯರ್ ಮೆಡಿಸಿನ್ ವಿಭಾಗಗಳನ್ನು ಹೊಂದಿದೆ.
ಇದು ನಿರ್ದಿಷ್ಟ ಮಂಡಳಿಗಳು, ಎರಡನೇ ಅಭಿಪ್ರಾಯ ಚಿಕಿತ್ಸಾಲಯ, ಓಂಕೊ-ರೋಗಶಾಸ್ತ್ರ ಮತ್ತು ಓಂಕೊ-ವಿಕಿರಣಶಾಸ್ತ್ರ ಸೇವೆಗಳನ್ನು ಹೊಂದಿದೆ. ಎಸ್ಮೋ ಮಾನ್ಯತೆ ಕ್ಯಾನ್ಸರ್ ಮಾರ್ಗಸೂಚಿಗಳ ರಚನೆ, ಕ್ಯಾನ್ಸರ್ ತಜ್ಞರ ಬೆಂಬಲ ಮತ್ತು ಪ್ರಶಾಮಕ ಆರೈಕೆಗಾಗಿ ಕನಿಷ್ಠ ಮಾನದಂಡ ಮತ್ತು ಗುಣಮಟ್ಟದ ಕ್ಯಾನ್ಸರ್ ಆರೈಕೆಗಾಗಿ ಮಣಿಪಾಲಕ್ಕೆ ಅಂತಾರಾಷ್ಟ್ರೀಯ ಎಸ್ಮೋಗಳ ಕಾರ್ಯನಿರತ ಭಾಗವಾಗಲು ಸಹಾಯ ಮಾಡುತ್ತದೆ.