Advertisement

ರಾತ್ರೋರಾತ್ರಿ ಬದಲಾದ ಖಾತೆ : ಒತ್ತಡಕ್ಕೆ ಮಣಿಯದಿರಿ

10:24 AM Feb 14, 2020 | sudhir |

ಉಪಚುನಾವಣೆಯಲ್ಲಿ ಗೆದ್ದವರಿಂದಲೇ ಬಿಜೆಪಿ ಸರ್ಕಾರ ಉಳಿದಿದೆ ಎಂಬುದನ್ನು ಯಡಿಯೂರಪ್ಪ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ನೂತನ ಸಚಿವರು ಪ್ರಬಲ ಖಾತೆ ಪಡೆಯಲು ಮುಂದಾಗಿರುವುದು ಕಾರ್ಯಕರ್ತರಲ್ಲಿ ಹಾಗೂ ಮೂಲ ಬಿಜೆಪಿಗರಲ್ಲಿ
ಒಂದು ರೀತಿಯ ನಿರಾಶಾಭಾವನೆ ಮೂಡಿಸಿದೆ.

Advertisement

ರಾಜ್ಯ ಭಾರತೀಯ ಜನತಾ ಪಾರ್ಟಿ ಸರ್ಕಾರದ ಸಂಪುಟ ಬಹುತೇಕ ಭರ್ತಿಯಾಗಿದೆ. ಪ್ರಮುಖ ಖಾತೆಗಳ ಹಂಚಿಕೆಯೂ ಪೂರ್ಣಗೊಂಡಿದೆ. ಕಾಂಗ್ರೆಸ್‌, ಜಾತ್ಯತೀತ ಜನತಾದಳವನ್ನು ತ್ಯಜಿಸಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿಕೊಂಡು ಉಪಚುನಾವಣೆ ಸ್ಪರ್ಧಿಸಿ ಗೆದ್ದವರಲ್ಲಿ ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ ಹೊರತುಪಡಿಸಿ ಎಲ್ಲರಿಗೂ ಸಚಿವ ಸ್ಥಾನ ನೀಡಿ, ಖಾತೆ ಹಂಚಿಕೆಯೂ ಮಾಡಲಾಗಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಂಚಿಕೆ ಮಾಡಿರುವ ಖಾತೆಗಳಲ್ಲಿ ತೃಪ್ತಿಕಾಣದ ನೂತನ ಸಚಿವರಲ್ಲಿ ಕೆಲವರು ರಾತ್ರೋರಾತ್ರಿ ಮುಖ್ಯಮಂತ್ರಿಗಳ ಮನೆಗೆ ಹೋಗಿ, ಅಲ್ಲಿಯೇ ಠಿಕಾಣಿ ಹೂಡಿ, ಸೂರ್ಯೋದಯದೊಳಗೆ ತಮ್ಮ ಖಾತೆಯನ್ನೇ ಬದಲಿಸಿಕೊಂಡಿದ್ದಾರೆ!
ಕೇಡರ್‌ ನೆಲೆಯಲ್ಲಿ ಬೆಳೆದುಬಂದ ರಾಷ್ಟ್ರೀಯ ಪಕ್ಷವೊಂದರಲ್ಲಿ, ವಲಸೆ ಬಂದು ಸಚಿವರಾದವರ ಒತ್ತಡಕ್ಕೆ ಮಣಿದು ರಾತ್ರೋ ರಾತ್ರಿ ಖಾತೆ ಬದಲಾವಣೆ ಮಾಡುವುದು ಕಾರ್ಯಕರ್ತರಲ್ಲಿ ಹಾಗೂ ಮೂಲ ಬಿಜೆಪಿಗರಲ್ಲಿ
ಒಂದು ರೀತಿಯ ನಿರಾಶಾಭಾವನೆ ಮೂಡಿಸಿದೆ.

ರಾತ್ರಿ ಬೆಳಗಾವುದರೊಳಗೆ ಅರಣ್ಯ ಖಾತೆ ಹೊಂದಿದ್ದ ಬಿ.ಸಿ.ಪಾಟೀಲ್‌ ಕೃಷಿ ಸಚಿವರಾದರೆ, ಸಣ್ಣ ಕೈಗಾರಿಕೆ ಸಚಿವರಾಗಿದ್ದ ಗೋಪಾಲಯ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದರು! ಆಹಾರ ಸಚಿವರಾಗಿದ್ದ ಆನಂದ್‌ ಸಿಂಗ್‌ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆಯ ಸಚಿವರಾದರು. ಬೈರತಿ ಬಸವರಾಜು ಅವರಿಗೆ ನಗರಾಭಿವೃದ್ಧಿ ಖಾತೆ ಜತೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ ಹೊಣೆಗಾರಿಕೆ ನೀಡಲಾಗಿದೆ. ಶಿವರಾಮ ಹೆಬ್ಟಾರ್‌ ಅವರಿಗೆ ಕಾರ್ಮಿಕ ಖಾತೆ ಜತೆಗೆ ಸಕ್ಕರೆ ಖಾತೆಯೂ ವಹಿಸಲಾಗಿದೆ. ಶ್ರೀಮಂತ ಪಾಟೀಲ್‌ ಅವರಿಗೆ ಜವಳಿ ಖಾತೆಯೂ ಸೇರಿದಂತೆ ಕೈಮಗ್ಗ, ಅಲ್ಪಸಂಖ್ಯಾತರ ಕಲ್ಯಾಣ ಖಾತೆ ನೀಡಲಾಯಿತು.

ಮುಖ್ಯಮಂತ್ರಿಗಳು ಹೇಳಿದಂತೆ ಗೆದ್ದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲೂ ಕೆಲವರಿಗೆ ಸರ್ಕಾರದ ಪ್ರಮುಖ ಖಾತೆಗಳನ್ನೇ ಹಂಚಿಕೆ ಮಾಡಲಾಗಿದೆ. ಇಷ್ಟಾದರೂ ತೃಪ್ತಿಕಾಣದೇ ಮುಖ್ಯಮಂತ್ರಿಗಳ ಮೇಲೆ ರಾತ್ರೋರಾತ್ರಿ ಒತ್ತಡ ತಂದು ತಮಗೆ ಬೇಕಿರುವ ಖಾತೆಯನ್ನು ಬದಲಾಯಿಸಿಕೊಳ್ಳುವಷ್ಟು ಪ್ರಾಬಲ್ಯವನ್ನು ನೂತನ ಸಚಿವರು ಪಡೆದಿದ್ದಾರೆ ಎಂದಾದರೆ, ಬಿಜೆಪಿ ಸರ್ಕಾರದಲ್ಲಿ ಮೂಲ ಬಿಜೆಪಿಗರು ಮೂಲೆ ಗುಂಪಾಗುತ್ತಿದ್ದಾರೆಯೇ ಅಥವಾ ಮೂಲ ಬಿಜೆಪಿಗರ ಮಾತಿಗೆ ಬೆಲೆ ಇಲ್ಲವೇ
ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಚರ್ಚಾ ವಿಷಯವಾಗಿದೆ.

ರಾಜ್ಯ ರಾಜಕೀಯ ಇತಿಹಾಸದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಗಟ್ಟಿ ನಿಲುವುಗಳು ಸಾಕಷ್ಟಿವೆ. ಉಪಚುನಾವಣೆಯಲ್ಲಿ ಗೆದ್ದವರಿಂದಲೇ ಬಿಜೆಪಿ ಸರ್ಕಾರ ಉಳಿದಿದೆ ಎಂಬುದನ್ನು ಯಡಿಯೂರಪ್ಪ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ನೂತನ ಸಚಿವರು ಪ್ರಬಲ ಖಾತೆ ಪಡೆಯಲು ಮುಂದಾಗಿರುವುದು ಬಿಜೆಪಿ ವಲಯದಲ್ಲೀಗ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಮ್ಮೆ ಸಚಿವ ಸಂಪುಟ ವಿಸ್ತರಣೆಯಾಗಿ ಮೂಲ ಬಿಜೆಪಿಗರಿಗೆ ಸಚಿವಸ್ಥಾನ ನೀಡಿದಲ್ಲಿ, ಉಪಚುನಾವಣೆಯಲ್ಲಿ ಗೆದ್ದು ಸಚಿವರಾದವರು ತಮ್ಮ ಖಾತೆಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಮತ್ತೆ ಮೂಲ ಬಿಜೆಪಿಗರೇ ತ್ಯಾಗ ಮಾಡಬೇಕಾದ ಸ್ಥಿತಿಯೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮುಂದೆ ಬಂದರೂ ಆಶ್ಚರ್ಯ ಇಲ್ಲ!

Advertisement

ರಾಜ್ಯದ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂತಹ ವಿಚಾರ ಹಾಗೂ ನಿರ್ಧಾರಗಳಲ್ಲಿ ಇನ್ನಷ್ಟು ಗಟ್ಟಿಗರಾಗುವುದು ಒಳ್ಳೆಯದು. ಇಲ್ಲವಾದರೆ ಪಕ್ಷ ಹಾಗೂ ಸರ್ಕಾರದಲ್ಲಿ ಮೂಲ, ವಲಸಿಗರ ಶೀತಲ ಸಮರ ಇನ್ನಷ್ಟು ಗಂಭೀರವಾಗಬಹುದು. ಇದು ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮುಳುವಾಗಬಹುದು. ಇವೆಲ್ಲ ಅಂಶಗಳನ್ನು ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದು ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next