ಕಾಬೂಲ್: ಅಫ್ಘಾನಿಸ್ಥಾನದಲ್ಲೀಗ ತಾಲಿಬಾನ್ ಆಡಳಿತ ಆರಂಭಗೊಂಡಿದೆ. ಹಾಗಾದರೆ ಇಲ್ಲಿನ ಕ್ರಿಕೆಟ್ ಗತಿ ಏನು ಎಂಬ ಪ್ರಶ್ನೆ, ಆತಂಕ ಸಹಜ. ಇದರ ನಡುವೆಯೇ ಅಚ್ಚರಿಯ ವಿದ್ಯಮಾನವೊಂದು ಸಂಭವಿಸಿದ್ದು ವರದಿಯಾಗಿದೆ.
ಗುರುವಾರ ತಾಲಿಬಾನ್ ಪಡೆ ಕಾಬೂಲ್‌ನಲ್ಲಿರುವ “ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ’ (ಎಸಿಬಿ) ಕಚೇರಿಗೆ ಆಗಮಿಸಿದ್ದಾಗಿಯೂ, ಈ ಗುಂಪಿನಲ್ಲಿ ಅಫ್ಘಾನಿಸ್ಥಾನದ ಮಾಜಿ ಕ್ರಿಕೆಟಿಗ ಅಬ್ದುಲ್ಲ ಮಜಾರಿ ಕೂಡ ಇದ್ದರೆಂದೂ ತಿಳಿದು ಬಂದಿದೆ. ಇದರ ಚಿತ್ರವೊಂದು ವೈರಲ್ ಆಗಿದೆ.
ಕಾನ್ಫರೆನ್ಸ್ ಹಾಲ್‌ನಲ್ಲಿ ಚರ್ಚೆ :
ಚಿತ್ರದಲ್ಲಿ ತಾಲಿಬಾನ್ ಪಡೆಯ ಕೆಲವು ಸದಸ್ಯರು ಎಸಿಬಿಯ ಕಾನ್ಫರೆನ್ಸ್ ಹಾಲ್‌ನಲ್ಲಿ ಕುಳಿತು ಚರ್ಚಿಸುತ್ತಿರುವುದನ್ನು ಕಾಣ ಬಹುದು. ದೇಶದ ಕ್ರಿಕೆಟಿಗರ ಮುಂದೆ ಅಂಧಕಾರ ಕವಿದಿರುವ ಈ ಹೊತ್ತಿನಲ್ಲಿ ತಾಲಿಬಾನಿಗಳು ಅಫ್ಘಾನ್ ಕ್ರಿಕೆಟಿನ ಭವಿಷ್ಯದ ಬಗ್ಗೆ ಚರ್ಚಿಸಿದ್ದಾಗಿ ತಿಳಿದು ಬಂದಿದೆ.
ಮಂಡಳಿಯ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಹಮೀದ್ ಶಿನ್ವರಿ ಕೆಲವು ದಿನಗಳ ಹಿಂದೆ ಹೇಳಿಕೆಯೊಂದನ್ನು ನೀಡಿ, “ತಾಲಿಬಾನಿಗರಿಂದ ಕ್ರಿಕೆಟಿಗೆ ಯಾವುದೇ ತೊಂದರೆಯಾಗದು, ಅವರೂ ಕ್ರಿಕೆಟ್ ಪ್ರೇಮಿಗಳು, ಆರಂಭದಿಂದಲೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ’ ಎಂದಿದ್ದರು.
ಅಫ್ಘಾನಿಸ್ಥಾನ ಮುಂದಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ತಂಡದ ಮ್ಯಾನೇಜರ್ ಹಿಕ್ಮತ್ ಹಸನ್ ಇತ್ತೀಚೆಗಷ್ಟೇ ಭರವಸೆ ನೀಡಿದ್ದರೆಂಬುದೂ ಉಲ್ಲೇಖನೀಯ.