Advertisement

ರೈತನ ಆಕಸ್ಮಿಕ ಸಾವು, ಬೆಳೆ ಬೆಂಕಿಗಾಹುತಿ ಪರಿಹಾರ ದ್ವಿಗುಣ

07:25 AM Dec 26, 2018 | |

ಕೊಪ್ಪಳ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ರೈತ ಆಕಸ್ಮಿಕ ಹಾಗೂ ಹಾವು ಕಡಿದು ಮೃತಪಟ್ಟರೆ ಆತನ ಕುಟುಂಬಕ್ಕೆ ಇನ್ಮುಂದೆ 2 ಲಕ್ಷ ರೂ. ಪರಿಹಾರ ಕೊಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ರೈತ ಬೆಳೆದ ಬೆಳೆ ಬೆಂಕಿಗೆ ಆಕಸ್ಮಿಕವಾಗಿ ಆಹುತಿಯಾದರೆ 20 ಸಾವಿರ ರೂ.ನೀಡಲು ನಿರ್ಧರಿಸಿದೆ.

Advertisement

ರೈತ ಸಮೂಹ ದಿನದ 24 ಗಂಟೆಯೂ ಜಮೀನಿನಲ್ಲಿಯೇ ಕಾಲ ಕಳೆಯುತ್ತದೆ. ಕೃಷಿ ಕೆಲಸ ಮಾಡುವ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ಈ ಮೊದಲು ಸರ್ಕಾರದ ಮಟ್ಟದಲ್ಲಿ ಅವರಿಗೆ ಅಲ್ಪ ಮೊತ್ತ ಕೊಟ್ಟು ಕೈತೊಳೆದುಕೊಳ್ಳಲಾಗುತ್ತಿತ್ತು. ಇದರಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬ ವರ್ಗ ನೂರೆಂಟು ನೋವು ಅನುಭವಿಸಿ ಬದುಕು ಸಾಗಿಸುತ್ತಿತ್ತು. ಆದರೆ ಇದನ್ನೆಲ್ಲ ಅರಿತ ರಾಜ್ಯ ಸರ್ಕಾರ ರೈತನ ಕುಟುಂಬಕ್ಕೆ ಅಲ್ಪ ಪ್ರಮಾಣದಲ್ಲಿ ಭದ್ರತೆ ಕೊಡಲು ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ.

ರಾಜ್ಯದ ಯಾವುದೇ ಭಾಗದಲ್ಲಿ ರೈತ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಹಾವು ಕಚ್ಚಿ ಮೃತಪಟ್ಟರೆ, ತೆಂಗು ಹಾಗೂ ಅಡಕೆ ಮರದಿಂದ ಬಿದ್ದು ಅಸುನೀಗಿದರೆ ಅಥವಾ ಆಕಸ್ಮಿಕ ಅವಘಡ ಸಂಭವಿಸಿ ಮೃತಪಟ್ಟರೆ ಸರ್ಕಾರ ಈ ಮೊದಲು 1 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಆದರೆ ಪ್ರಸಕ್ತ ಸಾಲಿನಿಂದ ಪರಿಹಾರದ ಮೊತ್ತವನ್ನು 2 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ. ಬೆಳೆಯನ್ನು ಹೊಲದಲ್ಲಿ ಗೂಡು
ಹಾಕಿಕೊಂಡಿದ್ದರೆ ಅಥವಾ ಕಾಳು ಸಮೇತ ಗೂಡು ಬೆಂಕಿಗೆ ಆಕಸ್ಮಿಕವಾಗಿ ಸುಟ್ಟು ಹಾನಿಯಾದರೆ ರೈತನ ಜೀವನೋಪಾಯಕ್ಕೆ ಕನಿಷ್ಠ 10 ಸಾವಿರ ರೂ. ಪರಿಹಾರ ಕೊಡುವ ವ್ಯವಸ್ಥೆ ಮಾಡಿತ್ತು. ಅದನ್ನೂ 20 ಸಾವಿರ ರೂ.ಗೆ ಹೆಚ್ಚಳ ಮಾಡಿದೆ.

ಪರಿಹಾರ ಮೊತ್ತ ಕಡಿಮೆಯಾಯ್ತು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೋದ್ಯಮ ಸೇರಿ ಇತರೆ ವಲಯಕ್ಕೆ ಅನ್ಯ ಅನುದಾನದ ಹೊಳೆಯನ್ನೇ ಹರಿಸುತ್ತವೆ. ಆದರೆ ಕೃಷಿ ವಲಯಕ್ಕೆ ಹೆಚ್ಚಿನ ಕಾಳಜಿ ಕೊಡಲ್ಲ. ಪರಿಹಾರ ಮೊತ್ತವನ್ನು ಅಲ್ಪ 
ಪ್ರಮಾಣದಲ್ಲಿ ಕೊಟ್ಟು ಕೈ ತೊಳೆದುಕೊಳ್ಳುತ್ತಿವೆ ಎನ್ನುವ ಆರೋಪ ಸಾಮಾನ್ಯವಾಗಿದೆ. ರೈತನ ಬೆಳೆ ಹಾನಿ ಅನುಸಾರ ಪರಿಹಾರ ಕೊಟ್ಟರೆ ಆತನ ಕುಟುಂಬಕ್ಕೂ ನೆರವಾಗಲಿದೆ. ಕೇವಲ 20 ಸಾವಿರ ರೂ. ಪರಿಹಾರ ಕೊಟ್ಟರೆ ಯಾವುದಕ್ಕೂ ಸಾಲದು. ಇನ್ನು ರೈತ ಕೃಷಿ ಚಟುವಟಿಕೆ ವೇಳೆ ಮೃತಪಟ್ಟರೆ 2 ಲಕ್ಷ ಆತನ ಕುಟುಂಬದ ಜೀವನ ಭದ್ರತೆಗೆ ಸಾಕಾಗುವುದಿಲ್ಲ ಎನ್ನುವ ಮಾತುಗಳು ಕೇಳಿ
ಬಂದಿವೆ. 

ಕೃಷಿ ಚಟುವಟಿಕೆಯಲ್ಲಿ ರೈತ ತೊಡಗಿದ್ದ ವೇಳೆ ಆಕಸ್ಮಿಕವಾಗಿ ಮೃತಪಟ್ಟರೆ ಸರ್ಕಾರ 1 ಲಕ್ಷ ರೂ. ಪರಿಹಾರ ಕೊಡುತ್ತಿತ್ತು. ಆದರೆ ಪ್ರಸಕ್ತ ವರ್ಷ 2 ಲಕ್ಷ ರೂ.ಗೆ ಪರಿಹಾರ ಮೊತ್ತ ಹೆಚ್ಚಿಸಿದೆ. ಇನ್ನು ಬೆಳೆ ಆಕಸ್ಮಿಕ ಬೆಂಕಿಗೆ ಆಹುತಿಯಾದರೆ ಅದರ ಪರಿಹಾರವನ್ನೂ ದ್ವಿಗುಣಗೊಳಿಸಿ ಆದೇಶ ಮಾಡಿದೆ.
ಶಬಾನಾ ಶೇಖ್‌ ಜಂಟಿ ಕೃಷಿ ನಿರ್ದೇಶಕಿ, ಕೊಪ್ಪಳ

Advertisement

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next