Advertisement

ತ್ರಾಸಿ: ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಹೆಚ್ಚಳ

09:48 PM Oct 28, 2019 | Sriram |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯು ತ್ರಾಸಿ ಭಾಗದಲ್ಲಿ ಅವೈಜ್ಞಾನಿಕ ಆಗಿರುವುದರಿಂದ ದಿನೇ ದಿನೇ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪದೇ ಪದೇ ಅಪಘಾತ ಸಂಭವಿಸುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟವರು ಯಾರೂ ಗಮನ ವಹಿಸಿದೇ ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವುದಾಗಿ ಆರೋಪಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಬೀಚ್‌ ಸಮೀಪ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು ಇನ್ನಷ್ಟು ಅಪಘಾತಗಳಿಗೆ ಎಡೆಮಾಡಿಕೊಡುವಂತಿದೆ. ಈ ಭಾಗದಲ್ಲಿ ಹಳ್ಳಿಮಿತಿಗಳಲ್ಲಿ ಸರ್ವಿಸ್‌ ರಸ್ತೆಗಳ ನಿರ್ಮಾಣವಾಗಿಲ್ಲ. ಹೀಗಾಗಿ ದ್ವಿಚಕ್ರ ಮತ್ತು ಲಘು ವಾಹನ ಸವಾರರು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ನಡುವಿನ ಸಂಧಿಯಲ್ಲಿ ವಾಹನ ಸವಾರಿ ಮಾಡಿಕೊಂಡು ಬರುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ರಾತ್ರಿ ವೇಳೆ ಈ ರೀತಿಯ ಸಂಚಾರ ಬಹಳ ಅಪಾಯಕಾರಿಯಾಗಿದ್ದು, ಅಪಘಾತಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ ಹಲವು ಪ್ರದೇಶಗಳಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗಲು ಸೂಕ್ತ ವ್ಯವಸ್ಥೆಗಳಿಲ್ಲ. ಹೀಗಾಗಿ ಪಾದಚಾರಿಗಳು ರಸ್ತೆಯ ಮೇಲೆ ನಡೆದುಕೊಂಡು ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇನ್ನೊಂದೆಡೆ ಪ್ರಸಿದ್ಧ ತ್ರಾಸಿ ಕಡಲ ತೀರದಿಂದ ತ್ರಾಸಿ ಬೈಪಾಸ್‌ ಕಡೆ ಬರಬೇಕಾದರೆ ಸುಮಾರು 5ರಿಂದ 6 ಕಿ.ಮೀ. ದೂರದ ಮರವಂತೆಯಲ್ಲಿರುವ ರಸ್ತೆ ವಿಭಾಜಕಗಳನ್ನು ದಾಟಿ ಬರಬೇಕು. ತ್ರಾಸಿ ಬೀಚ್‌ ಸಮೀಪ ಇದ್ದ ಯು ತಿರುವನ್ನು ಮುಚ್ಚಲಾಗಿದ್ದು ಕುಂದಾಪುರ ಕಡೆಗೆ ಸಾಗುವ ವಾಹನ ಸವಾರರು ಮರವಂತೆ ತನಕ ಸಾಗಿ ಸುತ್ತು ಹೊಡೆದು ತ್ರಾಸಿ ಬೈಪಾಸ್‌ ಮೂಲಕ ಕುಂದಾಪುರಕ್ಕೆ ತೆರಳಬೇಕಿದೆ. ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದ ರಾಜ್ಯದ ಪ್ರಸಿದ್ಧ ಪ್ರವಾಸೋದ್ಯಮ ತಾಣವಾಗಿರುವ ತ್ರಾಸಿ-ಮರವಂತೆ ಬೀಚ್‌ ಪ್ರವಾಸಿಗರಿಗೆ ದೂರದ ಬೆಟ್ಟವಾಗುವ ಸಾಧ್ಯತೆಗಳಿದೆ.

ಈ ಪ್ರದೇಶದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸ್ಥಳೀಯ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ಮನ ಬಂದಂತೆ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪಾದಚಾರಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಪ್ರಮುಖ ಪ್ರವಾಸೋದ್ಯಮ ತಾಣವಿದ್ದರೂ ಈ ಭಾಗದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ರಸ್ತೆಗಳ ನಿರ್ಮಾಣವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವು ದರ ಮೊದಲು ತ್ರಾಸಿ-ಮರವಂತೆ ಬೀಚ್‌ ಸಮೀಪ ಹೆದ್ದಾರಿಯಲ್ಲಿ “ಯು’ ತಿರುವು, ಸರ್ವಿಸ್‌ ರಸ್ತೆ ಹಾಗೂ ಪಾದಚಾರಿಗಳು ಸಂಚರಿಸಲು ಫುಟ್‌ಪಾತ್‌ ನಿರ್ಮಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜನಪ್ರತಿನಿಧಿಗಳಲ್ಲಿ ಹಾಗೂ ಗುತ್ತಿಗೆದಾರರಲ್ಲಿ ಮನವಿ ಮಾಡಿಕೊಂಡಿರುವ ಸ್ಥಳೀಯರು, ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಹೋರಾಟದ ಹಾದಿ ತುಳಿಯಲು ನಿರ್ಧರಿಸಿದ್ದಾರೆ.

Advertisement

ಎಚ್ಚರಿಕೆ ವಹಿಸಬೇಕಿದೆ
ಹೆದ್ದಾರಿ ಕಾಮಗಾರಿ ಇನ್ನೂ ಮುಗಿಯದಿರುವ ಕಾರಣ ವಾಹನ ಸವಾರರು ಆದಷ್ಟು ಎಚ್ಚರಿಕೆ ವಹಿಸಬೇಕು. ವನ್‌ ವೇಯಲ್ಲಿ ಸಂಚರಿಸಬೇಡಿ. ಅಪಘಾತಕ್ಕೆ ಇದು ಕೂಡ ಪ್ರಮುಖ ಕಾರಣವಾಗುತ್ತಿದೆ. ಈ ಬಗ್ಗೆ ಪೊಲೀಸ್‌ ಜನ ಸಂಪರ್ಕ ಸಭೆಗಳನ್ನು ಕೂಡ ಹಲವು ಬಾರಿ ನಡೆಸಿ, ವಾಹನ ಮಾಲಕರು, ಚಾಲಕರಿಗೆ ಸೂಚನೆ ನೀಡಲಾಗಿದೆ. ತ್ರಾಸಿ, ಮರವಂತೆ ಭಾಗದಲ್ಲಿ ಸೂಕ್ತ ಸುರಕ್ಷತಾ ಚಾಲನೆಗೆ ಅನುಕೂಲವಾಗುವಂತೆ ಈಗಾಗಲೇ ಠಾಣೆಯ ವತಿಯಿಂದ ಬ್ಯಾರಿಕೇಡ್‌ ಅಳವಡಿಸಲಾಗಿದೆ.
-ವಾಸಪ್ಪ ನಾಯ್ಕ,
ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ

90 ಅಪಘಾತ: 16 ಸಾವು
ಹೆಮ್ಮಾಡಿಯಿಂದ ಮುಳ್ಳಿಕಟ್ಟೆ, ತ್ರಾಸಿ, ಮರವಂತೆಯವರೆಗಿನ 10 ವ್ಯಾಪ್ತಿಯೊಳಗೆ ರಾ.ಹೆದ್ದಾರಿ 66 ರಲ್ಲಿ ಕಳೆದ 3 ವರ್ಷಗಳಲ್ಲಿ 90 ಕ್ಕೂ ಮಿಕ್ಕಿ ಅಪಘಾತಗಳು ಸಂಭವಿಸಿವೆ. 2017 ರಲ್ಲಿ 34, 2018ರಲ್ಲಿ 26, 2019ರಲ್ಲಿ 23 ಅಪಘಾತಗಳು ನಡೆದಿವೆ. ಇದರಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.

ಸರ್ವಿಸ್‌ ರಸ್ತೆ ಬೇಡಿಕೆ
ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಬೀಚ್‌ ಸಮೀಪ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು ಇನ್ನಷ್ಟು ಅಪಘಾತಗಳಿಗೆ ಎಡೆಮಾಡಿಕೊಡುವಂತಿದೆ. ತ್ರಾಸಿ-ಮರವಂತೆ ಬೀಚ್‌ ಸಮೀಪ ಹೆದ್ದಾರಿಯಲ್ಲಿ “ಯು’ ತಿರುವು, ಸರ್ವಿಸ್‌ ರಸ್ತೆ ಹಾಗೂ ಪಾದಚಾರಿಗಳು ಸಂಚರಿಸಲು ಫುಟ್‌ಪಾತ್‌ ನಿರ್ಮಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next