Advertisement

ರಾ.ಹೆದ್ದಾರಿಯಲ್ಲಿ ಸರಣಿ ಅಪಘಾತ ಮಕ್ಕಳಿಬ್ಬರ ಸಾವು, ಹಲವು ಮಂದಿಗೆ ಗಾಯ

09:50 AM Jul 24, 2018 | Team Udayavani |

ಕಾಸರಗೋಡು: ಹೊಂಡಗುಂಡಿ ರಸ್ತೆಯಾಗಿರುವ ರಾಷ್ಟ್ರೀಯ ಹೆದ್ದಾರಿ ಅಡ್ಕತ್ತಬೈಲ್‌ನಲ್ಲಿ ರವಿವಾರ ರಾತ್ರಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಸಹೋದರರಾದ ಬಾಲಕರಿಬ್ಬರು ಸಾವಿಗೀಡಾಗಿ ಹಲವರು ಗಾಯಗೊಂಡಿದ್ದಾರೆ. ಅಡ್ಕತ್ತಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರದ ಹೆದ್ದಾರಿಯಲ್ಲಿ ರವಿವಾರ ರಾತ್ರಿ ಮಂಗಳೂರಿಗೆ ಸಾಗುತ್ತಿದ್ದ ಕಾರು, ಟೂರಿಸ್ಟ್‌ ಬಸ್‌, ಎರಡು ಬೈಕ್‌ಗಳು ಮತ್ತು ಎದುರಿನಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ಸರಣಿ ವಾಹನ ಅಪಘಾತ ಸಂಭವಿಸಿದೆ.

Advertisement

ಅಪಘಾತದಲ್ಲಿ ಬೈಕೊಂದರಲ್ಲಿ ಪ್ರಯಾಣಿಸುತ್ತಿದ್ದ ಚೌಕಿ ಅರ್ಜಾಲ್‌ ರಸ್ತೆ ಬಳಿಯ ನಿವಾಸಿ ಹಾಗೂ ಕಾಸರಗೋಡು ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಸಿದ್ಧ ಉಡುಪು ಅಂಗಡಿಯ ಪಾಲುದಾರರಾಗಿರುವ ಎ.ಕೆ. ರಜೀಶ್‌- ಮೆಹಕ್ಲೂಮಾ ದಂಪತಿಯ ಪುತ್ರರಾದ ಮೊಹಮ್ಮದ್‌ ಮಿನ್‌ಹಾಜ್‌ (ನಾಲ್ಕೂವರೆ ವರ್ಷ) ಮತ್ತು ಇಬ್ರಾಹಿಂ ಶಾಸಿರ್‌ (7) ಸಾವಿಗೀಡಾದರು. ಗಂಭೀರ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮೊಹಮ್ಮದ್‌ ಮಿನ್‌ಹಾಜ್‌ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ, ಇಬ್ರಾಹಿಂ ಶಾಸಿರ್‌ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾದರು. ಮಿನ್‌ಹಾಜ್‌ ಚೆಮ್ನಾಡ್‌ ಜಮಾಯತ್‌ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿ. ಇಬ್ರಾಹಿಂ ಶಾಸಿರ್‌ ಎ.ಎ. ಮೋಡೆಲ್‌ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಎ.ಕೆ. ರಜೀಶ್‌ ರವಿವಾರ ರಾತ್ರಿ ತನ್ನ ಇಬ್ಬರು ಮಕ್ಕಳೊಂದಿಗೆ ಬೈಕ್‌ನಲ್ಲಿ ಕಾಸರಗೋಡಿನಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಗೊಂಡ ರಜೀಶ್‌ ಅವರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

ಗಾಯಾಳುಗಳು
ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮೇಲ್ಪರಂಬದ ರಿಸ್ವಾನ್‌(24), ಸಂಬಂಧಿಕ ಪೆರ್ವಾಡಿನ ರಫೀಕ್‌ (36), ರಿಸ್ವಾನ್‌ ಅವರ ಸಹೋದರಿ ರುಕ್ಸಾನಾ (28), ಈಕೆಯ ಮಕ್ಕಳಾದ ಜುಮಾನಾ (4) ಮತ್ತು ಆಯಿಷತ್‌ ಶಮ್ನಾ (2), ಇನ್ನೊಂದು ಬೈಕ್‌ನಲ್ಲಿದ್ದ ಜಮಾಲ್‌ ಅಹಮ್ಮದ್‌ ಗಾಯಗೊಂಡಿದ್ದು ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾದ ಬೈಕ್‌ಗಳು ಟೂರಿಸ್ಟ್‌ ಬಸ್ಸಿನ ಅಡಿಭಾಗದಲ್ಲಿ ಸಿಲುಕಿಕೊಂಡಿದ್ದವು. ಆ ದಾರಿಯಾಗಿ ಬರುತ್ತಿದ್ದ ಇತರ ವಾಹನಗಳು ಪರಸ್ಪರ ಢಿಕ್ಕಿ ಹೊಡೆದಿವೆ. ಅಪಘಾತಕ್ಕೀಡಾದ ಕಾರು ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದಾಕ್ಷಣ ಸ್ಥಳೀಯರು, ಕಾಸರಗೋಡು ಅಗ್ನಿಶಾಮಕ ದಳ ಮತ್ತು ಪೊಲೀಸರು ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ಸಾಗಿಸಿದರು. ಗಂಭೀರ ಗಾಯಗೊಂಡ ಇಬ್ರಾಹಿಂ ಶಾಸಿರ್‌ ನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಅಪಘಾತದಿಂದ ಅಡ್ಕತ್ತಬೈಲು ರಾ. ಹೆದ್ದಾರಿಯಲ್ಲಿ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

Advertisement

ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರವಿವಾರ ರಾತ್ರಿ ಸಂಭವಿಸಿದ ಅಪಘಾತದ ಬೆನ್ನಲ್ಲೆ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರ ನೇತೃತ್ವದಲ್ಲಿ ಮುಸ್ಲಿಂ ಲೀಗ್‌ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ರಸ್ತೆಯನ್ನು ಶೀಘ್ರವೇ ದುರಸ್ತಿ ಗೊಳಿಸಬೇಕೆಂದು ಆಗ್ರಹಿಸಿದರು. ಇದರ ಪರಿಣಾಮ ವಾಗಿ ಹೆದ್ದಾರಿ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ.

ರಸ್ತೆ ಹೊಂಡಗಳೇ ಕಾರಣ
ಅಡ್ಕತ್ತಬೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಬೃಹತ್‌ ಹೊಂಡಗಳೇ ಅಪಘಾತಕ್ಕೆ ಕಾರಣ. ಹೊಂಡವನ್ನು ತಪ್ಪಿಸುವ ವೇಳೆ ವಾಹನಗಳು ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದುಕೊಂಡಿವೆ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಆಳದ ಹೊಂಡಗಳು ಸೃಷ್ಟಿಯಾಗಿವೆ. ಅವುಗಳಲ್ಲಿ ಮಳೆ ನೀರು ತುಂಬಿದಾಗ ರಸ್ತೆ ಸ್ಪಷ್ಟವಾಗಿ ಗೋಚರಿಸಿದೆ ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿದೆ.

ಇಲಾಖೆಯ ನಿರ್ಲಕ್ಷ ?
ರಾಷ್ಟ್ರೀಯ ಹೆದ್ದಾರಿಯ ಶೋಚ ನೀಯಾವಸ್ಥೆಯನ್ನು ‘ಉದಯವಾಣಿ’ ಪತ್ರಿಕೆಯಲ್ಲಿ ಹಲವು ಬಾರಿ ಪ್ರಕಟಿಸಲಾಗಿತ್ತು. ರಸ್ತೆ ಅಪಾಯಕಾರಿಯಾಗಿದೆ ಎಂಬ ಮುನ್ಸೂಚನೆಯನ್ನು ನೀಡಿತ್ತು. ಆದರೆ ಹೆದ್ದಾರಿ ಇಲಾಖೆ ನಿರ್ಲಕ್ಷ್ಯ ತೋರಿದ್ದು, ಎರಡು ಜೀವ ಗಳು ಬಲಿಯಾಗಿವೆ. ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಮಕ್ಕಳಿಬ್ಬರು ಬಲಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next