ಆಳಂದ: ಏ. 1ರಿಂದ ಸಂಭವಿಸುವ ರಸ್ತೆ ಅಪಘಾತಗಳ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ (ಸಿ ವರದಿಯಂತೆ) ಗಾಯಗೊಂಡವರಿಗೆ ಮತ್ತು ಮೃತಪಟ್ಟವರ ಅವಲಂಬಿತ ಸದಸ್ಯರಿಗೆ ವಿತರಿಸುವ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಪರಿಸ್ಕರಿಸಿ (ಹೆಚ್ಚಿಸಿ), ಜಾರಿಗೆ ತರುವಂತೆ ಸುತ್ತೋಲೆ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಮಹಾ ನಿರ್ದೇಶಕರು, ಆರಕ್ಷಕ ಮಹಾ ನಿರೀಕ್ಷಕರು ಸುತ್ತೋಲೆ ಹೊರಡಿಸಿ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ, ಠಾಣಾಧಿಕಾರಿಗಳಿಗೆ ಈ ಆದೇಶವನ್ನು ಅನುಷ್ಠಾನಕ್ಕೆ ತರುವಂತೆ ಸೂಚನೆ ನೀಡಿದ್ದಾರೆ.
ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಅಮಾಯಕ ಜನರು ಗಾಯಗೊಂಡು ಮೃತ ಪಟ್ಟಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರವು ಈ ಪ್ರಕರಣಕ್ಕೆ (ಸಿ ವರದಿ) ಗಾಯಗೊಂಡವರಿಗೆ 12500ರೂ. ಮತ್ತು ಮೃತಪಟ್ಟ ವ್ಯಕ್ತಿಯ ಅವಲಂಬಿತ ಸದಸ್ಯರಿಗೆ 50000 ರೂ. ಪರಿಹಾರ ಮೊತ್ತವನ್ನಾಗಿ ಡಿಸಿ ವಿತರಿಸುತ್ತಿದ್ದರು. ಆದರೆ ಕೇಂದ್ರ ಸಚಿವಾಲಯವು ಪರಿಷ್ಕೃತ ಗೊಳಿಸಿದ ಬಳಿಕ ಗಾಯಾಳುಗಳಿಗೆ 50 ಸಾವಿರ ರೂ., ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಮೊತ್ತವನ್ನು ಹೆಚ್ಚಿಸಿ ಏ. 1ರಿಂದ ಜಾರಿಗೆ ಬರುವಂತೆ ಕಳೆದ ಫೆ. 25ರಂದು ಗೆಜೆಟ್‌ನಲ್ಲಿ ಪ್ರಕಟಿಸಿ, ಸಂತ್ರಸ್ತರು ಪರಿಹಾರಕ್ಕೆ ಅರ್ಜಿ ಸಲ್ಲಿಸುವ ವಿಧಾನ, ನಮೂನೆಯಂತ ವಿವರಗಳನ್ನು ಭರ್ತಿ ಮಾಡಲು ಠಾಣಾಧಿಕಾರಿಗಳು ಸಹಕಾರಿಯಾಗಬೇಕು ಎಂದು ಹೇಳಿದೆ.
ಪರಿಹಾರ ವಿಳಂಬವಾದರೆ ನೊಂದ ಕುಟುಂಬದವರಿಗೆ ಅಪ ಘಾತ ನಿಧಿಯಿಂದ ತ್ವರಿತವಾಗಿ ಪರಿಹಾರ ಮೊತ್ತ ಪಾವತಿಸಬೇಕು. ಎಲ್ಲ ಪೊಲೀಸ್ ಠಾಣೆ ಅಧಿಕಾರಿಗಳು ಸಂತ್ರಸ್ತರಿಗೆ ನೆರವಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.