ಬಳ್ಳಾರಿ: ವಿಜಯನಗರ ಜಿಲ್ಲೆ ಕೂಡಗಲಿಗಿ ತಾಲೂಕು ಬಣವಿಕಲ್ಲು ಬಳಿ ಕ್ರೂಸರ್ ಪಲ್ಟಿಯಾಗಿ 5 ಜನರು ಮೃತಪಟ್ಟು, 9 ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ನಡೆದಿದೆ.
ನಿಡಗುಂದಿ ಸಿದ್ದಯ್ಯ ಕಾಳಗಿ(42), ಕಲ್ಲವ್ವ(60), ಲಕ್ಷ್ಮೀಬಾಯಿ(60), ಕಿರಶಹಾಳ್ ಗ್ರಾಮದ ಕಾಂತವ್ವ(50), ಆಲಮಟ್ಟಿ ಗ್ರಾಮದ ನೀಲಮ್ಮ(54) ಮೃತ ದುರ್ದೈವಿಗಳು.
ಹೊಸಪೇಟೆಯಿಂದ ಚಿತ್ರದುರ್ಗ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ಕ್ರೂಸರ್ ವಾಹನ, ಬಣವಿಕಲ್ಲು ಬಳಿ ಆಯತಪ್ಪಿ ಪಲ್ಟಿಯಾಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ನಂತರ ಮೃತಪಟ್ಟಿದ್ದಾರೆ. ಇನ್ನು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಾಪುರ ಜಿಲ್ಲೆ ನಿಡಗುಂದಿ ಗ್ರಾಮದ ಇವರೆಲ್ಲರೂ, ತಮಿಳು ನಾಡಿನ ರಾಮೇಶ್ವರ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರೆನ್ನಲಾಗಿದೆ. ಅತಿವೇಗವಾಗಿ ಚಲಾಯಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.
ಬಸವನ ಬಾಗೇವಾಡಿಯ ಬಸಮ್ಮ, ನಿಡಗುಂದಿಯ ನಿರ್ಮಲ, ಭೀಮೇಶಪ್ಪ, ಅನಸೂಯಾ, ಕಿರುಶಾಳ್ ರೇಣುಕಾ, ಸುಮಂಗಳಾ, ಸಿದ್ನಾಳ ಮಹಾನಂದೆಮ್ಮ, ತಿಪ್ಪಮ್ಮ, ಅಬ್ಯಾಳ್ ಶಂಕ್ರಮ್ಮ ತೀವ್ರ ಗಾಯಗೊಂಡಿದ್ದಾರೆ. ಇವರೆಲ್ಲರೂ ವಿಜಯಪುರ ಜಿಲ್ಲೆಯವರಾಗಿದ್ದಾರೆ. ಗಾಯಾಳು ನಿರ್ಮಲ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಸ್ಪತ್ರೆಗೆ ತೆರಳಿ ಗಾಯಳುಗಳನ್ನು ಭೆಟ್ಟಿಯಾಗಿ ವಿಚಾರಿಸಿದ್ದಾರೆ. ಕೂಡ್ಲಿಗಿ ಸಿಪಿಐ ಕೊಟ್ಟೂರು ಸಿಪಿಐ ಪಿಎಸ್ಐ, ಹೊಸಹಳ್ಳಿ ಪಿಎಸ್ಐ, ಮರಿಯಮ್ಮನಹಳ್ಳಿ ಪಿಎಸ್ಐ ಸೇರಿದಂತೆ ಹಾಗೂ ಹೈವೇ ಪೆಟ್ರೋಲ್ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ್ದಾರೆ.ಕೊಟ್ಟೂರು ಸಿಪಿಐ ನೇತೃತ್ವದಲ್ಲಿ ಪ್ರಕರಣ ತನಿಖೆ ಜರುಗಿಸಲಾಗಿದೆ ಎಂದು ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.