Advertisement
ಸರ್ಕಾರದ ನಿಯಮಗಳ ಪ್ರಕಾರ ಖಾಸಗಿ ಶಾಲೆಗಳು ಪ್ರತಿ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಶಾಲೆ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು ಎಂಬ ಸ್ಪಷ್ಟ ಸೂಚನೆ ಇದೆ. ಪ್ರವೇಶಾತಿ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಪ್ರಕ್ರಿಯೆ ಆರಂಭಿಸಿಬೇಕು ಎಂಬ ಶಿಸ್ತು ನಿಯಮವೂ ಇದೆ. ಆದರೆ, ಬೆಂಗಳೂರು ನಗರದ ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳು ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಮುಂಗಡವಾಗಿ ಸೀಟು ಕಾಯ್ದಿರಿಸುವ ಪ್ರಕ್ರಿಯೆ ನಡೆಸುತ್ತಿವೆ.
Related Articles
Advertisement
ಮುಂಗಡ ಬುಕಿಂಗ್‌ಗೆ ರಿಯಾಯ್ತಿ ಸೌಲಭ್ಯ!: ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ದಾಖಲಿಸಲು ಪೋಷಕರನ್ನು ಆಕರ್ಷಿಸುವ ದೃಷ್ಟಿಯಿಂದ ಶಾಲೆಗಳಲ್ಲಿ ಪ್ಯಾಕೇಜ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಈಗಲೇ ಸೀಟ್ ಬುಕ್ ಮಾಡಿಕೊಂಡು ಅರ್ಧದಷ್ಟು ಶುಲ್ಕ ಪಾವತಿಸುವ ಪಾಲಕ, ಪೋಷಕರಿಗೆ ರಿಯಾಯ್ತಿಯನ್ನೂ ಆಡಳಿತ ಮಂಡಳಿಗಳು ನೀಡುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಕೈತಪ್ಪಬಹುದು ಎಂಬ ಭಯದಿಂದ ಕೆಲ ಪೋಷಕರು ಈಗಾಗಲೇ ತಮ್ಮ ಮಕ್ಕಳಿಗೆ ಸೀಟು ಕಾಯ್ದಿರಿಸಿದ್ದಾರೆ ಎಂದು ಶಿಕ್ಷಣ ಸಂಘಟನೆಗಳು ಮಾಹಿತಿ ನೀಡಿವೆ.
ಶಿಕ್ಷಣ ಕಾಯ್ದೆಗೂ ತಿದ್ದುಪಡಿ ತನ್ನಿ: ಖಾಸಗಿ ವೈದ್ಯಕೀಯ ಸಂಸ್ಥೆಗಳು ನೀಡುವ ಚಿಕಿತ್ಸೆಗೆ ಶುಲ್ಕ ನಿಗದಿ ಸೇರಿದಂತೆ ಹಲವು ವಿಚಾರವಾಗಿ ನಿಯಂತ್ರಣ ಸಾಧಿಸಲು ಕೆಪಿಎಂಇ ತಿದ್ದುಪಡಿ ಕಾಯ್ದೆ ಮಂಡಿಸಿದಂತೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸಲು ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿವೆ.
ದೂರು ಸಲ್ಲಿಸಿದರೆ ಕಠಿಣ ಕ್ರಮ: ಇಲಾಖೆಯ ಸೂಚನೆ ಇಲ್ಲದೇ ಯಾವುದೇ ಶಿಕ್ಷಣ ಸಂಸ್ಥೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಆರಂಭಿಸುವಂತಿಲ್ಲ. ಈ ಬಗ್ಗೆ ಪೋಷಕರು ಅಥವಾ ಶಿಕ್ಷಣ ಸಂಘಟನೆಗಳು ದಾಖಲೆ ಸಹಿತ ದೂರು ಸಲ್ಲಿಸಿದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆಯ ಉನ್ನತಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಖಾಗಿಸ ಶಾಲೆಗೆ ವಾರ್ಷಿಕ ಎಷ್ಟು ಖರ್ಚು ಬರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸರ್ಕಾರ ಶುಲ್ಕ ನಿಯಂತ್ರಣಕ್ಕೆ ಕಾಯ್ದೆ ಅನುಷ್ಠಾನ ಮಾಡಬೇಕು. ಇದರಿಂದ ಶೇ.95ರಷ್ಟು ಶಾಲೆಗಳಿಗೆ ದೊಡ್ಡ ರಿಲೀಫ್ ಸಿಗುತ್ತದೆ. ತಿದ್ದುಪಡಿ ಕಾಯ್ದೆ ವೈಜ್ಞಾನಿಕವಾಗಿದ್ದರೆ ಖಂಡಿತ ಅದನ್ನು ಸ್ವಾಗತಿಸುತ್ತೇವೆ.-ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ * ರಾಜು ಖಾರ್ವಿ ಕೊಡೇರಿ