Advertisement

ನಿಯಮಿತ ಉತ್ತಮ ಆಹಾರ ಸ್ವೀಕಾರ, ದೋಷಯುಕ್ತ ಸೇವನೆಗೆ ನಕಾರ: ವೈದ್ಯತಜ್ಞರ ಕರೆ

11:32 PM Sep 29, 2021 | Team Udayavani |

ಉಡುಪಿ: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ಆಹಾರ ಮತ್ತು ದೈಹಿಕ ಚಟುವಟಿಕೆ ಹಾಗೂ ತಂಬಾಕು, ಸಿಗರೇಟ್‌, ಆಲ್ಕೋ ಹಾಲ್‌, ಫಾಸ್ಟ್‌ಫ‌ುಡ್‌, ಡ್ರಗ್ಸ್‌ ಗಳ ತ್ಯಜಿಸುವಿಕೆ ಅಗತ್ಯ ಎಂದು ಮಣಿಪಾಲ ಕೆಎಂಸಿ ಹೃದ್ರೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಅಬ್ದುಲ್‌ ರಝಾಕ್‌ ಯು.ಕೆ., ಮತ್ತು ಡಾ| ಮುಕುಂದ ಎ. ಪ್ರಭು ಹೇಳಿದರು.

Advertisement

“ವಿಶ್ವ ಹೃದಯ ದಿನಾಚರಣೆ’ ಪ್ರಯುಕ್ತ ಬುಧವಾರ ಉದಯವಾಣಿ ವತಿಯಿಂದ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ಇದು ಉದಯವಾಣಿ.ಕಾಂನ ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಂಡಿತು.

ಯಾವ ಆಹಾರ ಎಷ್ಟು?
ಸರಾಸರಿ ನಿತ್ಯ 400 ಗ್ರಾಂ ತರಕಾರಿ, ಹಣ್ಣುಗಳ ಸೇವನೆ ಉತ್ತಮ. ಇದರಲ್ಲಿ ತರಕಾರಿಗೆ ಪ್ರಾಶಸ್ತ್ಯ ಇರಬೇಕು. ಒಂದು ದಿನ ಒಬ್ಬರಿಗೆ 1,500ರಿಂದ 1,800 ಕ್ಯಾಲರಿ ಆಹಾರದ ಅಗತ್ಯವಿದೆ. ಇದರಲ್ಲಿ ಶೇ.30ರಷ್ಟು ಕೊಬ್ಬು, ಶೇ. 45ರಷ್ಟು ಕಾಬೋìಹೈಡ್ರೇಟ್‌, ಶೇ. 25ರಷ್ಟು ಪ್ರೊಟೀನ್‌ ಇರಬೇಕು. ಕಾಬೋì ಹೈಡ್ರೇಟ್‌ ಶಕ್ತಿಗಾಗಿ, ಪ್ರೊಟೀನ್‌ ಬೆಳವಣಿಗೆಗಾಗಿ, ಕೊಬ್ಬು ಮೂಳೆ, ಮೂಳೆಯ ಸಂಧಿ, ಮಿದುಳಿಗೆ ಅಗತ್ಯ ಎಂದರು.

ಅಧಿಕ ಉಪ್ಪು ಅಪಾಯ
ಒಬ್ಬ ವ್ಯಕ್ತಿಗೆ ಒಂದು ದಿನದಲ್ಲಿ ಐದು ಗ್ರಾಂ (ಒಂದು ಚಮಚ) ಉಪ್ಪು ಸಾಕು. ಆದರೆ ಭಾರತೀಯರ ಜೀವನಕ್ರಮದಲ್ಲಿ 10 ಗ್ರಾಂ ಉಪ್ಪು ಬಳಕೆಯಾಗುತ್ತಿದೆ. ಸಕ್ಕರೆ ಪ್ರಮಾಣ ದಿಂದ ಮಧುಮೇಹ, ಉಪ್ಪಿನಿಂದ ರಕ್ತದೊತ್ತಡ, ಹೃದಯ ರೋಗ ಬರುತ್ತದೆ.

ಈಜು ಅತ್ಯುತ್ತಮ
ಹೃದ್ರೋಗ ಸಮಸ್ಯೆ ಇರುವವರು ಕಠಿನ ಪರಿಶ್ರಮ ಪಡಬಾರದು. ದೈಹಿಕ ಚಟುವಟಿಕೆಗಳಲ್ಲಿ ಈಜು ಅತ್ಯುತ್ತಮ. ಮಧುಮೇಹ, ರಕ್ತದೊತ್ತಡ ಇರು ವವರು ವರ್ಷಕ್ಕೆ ಒಂದು ಬಾರಿ ಇಸಿಜಿ, ಇಕೊ ಪರೀಕ್ಷೆ, ಉಳಿದವರು 40 ವರ್ಷದ ಬಳಿಕ ಐದು ವರ್ಷ ಗಳಿ ಗೊಮ್ಮೆ ಪರೀಕ್ಷೆ ನಡೆ ಸಿದರೆ ಉತ್ತಮ.

Advertisement

ಕೋವಿಡ್‌ ಅಪಾಯ
ಕೋವಿಡ್‌ ವೈರಸ್‌ ಕೇಂದ್ರಿತವಾದರೂ ಇದು ರಕ್ತನಾಳದ ಮೇಲೆ ಪರಿಣಾಮ ಬೀರುತ್ತದೆ. ರಕ್ತ ಹೆಪ್ಪು ಗಟ್ಟುವಿಕೆಯಿಂದ ಆರೋಗ್ಯ ಹದ ಗೆಡುತ್ತದೆ. ನ್ಯುಮೋನಿಯಾ  ದಿಂದ ಶ್ವಾಸಕೋಶ ಗಟ್ಟಿಯಾಗಿ ಉಸಿರಾಡಲು ಕಷ್ಟವಾಗಿ ವೆಂಟಿಲೇಟರ್‌ ಬೇಕಾಗುತ್ತದೆ. ಹೀಗೆ ಹೃದಯ, ಶ್ವಾಸಕೋಶದ ಮೇಲೆ ಕೊರೊನಾ ಪರಿಣಾಮ ಬೀರು ವುದರಿಂದ ಹೃದ್ರೋಗಿ ಗಳು ಲಸಿಕೆ ಯನ್ನು ಪಡೆಯ ಬೇಕು ಎಂದರು.

ಆಯ್ದ ಪ್ರಶ್ನೆಗಳು
-ಮರವಂತೆ ಪ್ರಕಾಶ ಪಡಿಯಾರ್‌
- ಹೃದ್ರೋಗದ ಲಕ್ಷಣಗಳೇನು? ಎಂತಹ ವಾಕಿಂಗ್‌ ಉತ್ತಮ?
ನಡೆಯುವಾಗ ಉಸಿರಾಡಲು ಕಷ್ಟವಾಗುವುದು, ಕಾಲಿನಲ್ಲಿ ಊತ ಬರುವುದು, “ಕಣ್ಣುಕತ್ತಲು’ ಕಟ್ಟುವುದು, ಎದೆಯಲ್ಲಿ “ಡಬ ಡಬ’ ಶಬ್ದವಾಗುವುದು ಹೃದ್ರೋಗದ ಲಕ್ಷಣಗಳು. ಮಧುಮೇಹಿಗಳಿಗೆ ಹೃದ್ರೋಗದ ಲಕ್ಷಣಗಳು ಗೊತ್ತಾಗುವುದಿಲ್ಲ. ಆದ್ದರಿಂದ ಮಧುಮೇಹಿಗಳು ಹೆಚ್ಚು ನಿಗಾ ವಹಿಸಬೇಕು. ಇವರು ಸಕ್ಕರೆ, ಹೃದಯ, ಕಣ್ಣು ಪರೀಕ್ಷೆಗಳನ್ನು ಮಾಡುತ್ತಿರಬೇಕು. 60 ವರ್ಷ ಮೇಲ್ಪಟ್ಟವರು ಸಮತಟ್ಟು ಪ್ರದೇಶದಲ್ಲಿ ವಾಕಿಂಗ್‌ ಮಾಡಬೇಕು. ಏರು ಜಾಗದಲ್ಲಿ ನಡೆದಾಗ ಹೃದಯಕ್ಕೆ ಒತ್ತಡ ಆಗುತ್ತದೆ.

-ಹಮೀದ್‌ ವಿಟ್ಲ, ಅಬೂಬಕ್ಕರ್‌ ಅನಿಲಕಟ್ಟೆ
 ಹೃದ್ರೋಗಿಗಳು ಕೋವಿಡ್‌ ಲಸಿಕೆ ಪಡೆಯಬಹುದೆ?
ಕೋವಿಡ್‌ ಸೋಂಕಿತ ಹೃದ್ರೋಗಿಗಳು ಹೆಚ್ಚಿನ ಸಾವು ನೋವು ಕಂಡಿದ್ದಾರೆ. ಜನ್ಮಜಾತ ಹೃದ್ರೋಗಿ ಗಳೂ ಸಹಿತ ಎಲ್ಲ ರೀತಿಯ ಹೃದ್ರೋಗಿಗಳು ಅಗತ್ಯವಾಗಿ 2 ಡೋಸ್‌ ಲಸಿಕೆ ಪಡೆಯಬೇಕು.

-ರಮಾದೇವಿ ಮುಕ್ಕ
 ನನ್ನ ಮಗನಿಗೆ 62 ವರ್ಷ. ಈಗಾಗಲೇ ಆಂಜಿಯೋಪ್ಲಾಸ್ಟಿ ಆಗಿದೆ. ಆತ ಪಾನ್‌ ಹಾಕಿಕೊಳ್ಳುತ್ತಾನೆ. ತೊಂದರೆ ಇದೆಯೆ?
ಈಗಾಗಲೇ ಸ್ಟಂಟ್‌ ಹಾಕಿದ್ದಾರೆ. ಸಿಗರೇಟ್‌ ಸೇವನೆ, ತಂಬಾಕು ಸೇವನೆ ಇದ್ದರೆ ಇದು ಹೃದಯ ವನ್ನು ದುರ್ಬಲವನ್ನಾಗಿ ಮಾಡುತ್ತದೆ ಮತ್ತು ಇನ್ನಷ್ಟು ಬ್ಲಾಕ್‌ ಆಗಬಹುದು. ತಂಬಾಕು ತಿನ್ನಲೇಬಾರದು. ವಯಸ್ಸಾದವರು ರಕ್ತದೊತ್ತಡ ವನ್ನು ನಿಯಂತ್ರಣ ದಲ್ಲಿರಿಸಿಕೊಳ್ಳಬೇಕು. ಇಲ್ಲ ವಾದರೆ ಪಕ್ಷಾಘಾತ, ಹೃದಯ ದುರ್ಬಲ, ಕಿಡ್ನಿ ವೈಫ‌ಲ್ಯವಾಗಬಹುದು.

-ಕೃಷ್ಣ ಶೆಟ್ಟಿ ಐಕಳ
 ಒಂದೆರಡು ವರ್ಷಗಳ ಹಿಂದೆ ಶ್ವಾಸಕೋಶದ ಸಮಸ್ಯೆ ಇತ್ತು. ಹಿಂದೆ ಅಸ್ತಮಾ ಕಾಯಿಲೆ ಇತ್ತು. ಇದು ಹೃದಯದ ಮೇಲೆ ಪರಿಣಾಮ ಬೀರುತ್ತದೋ?
ಅಸ್ತಮಾ ನಿಯಂತ್ರಣದಲ್ಲಿದ್ದರೆ ತೊಂದರೆ ಇಲ್ಲ.

-ಬಿಎಸ್‌ ರಾವ್‌ ಉಡುಪಿ
 ಎರಡು ಬಾರಿ ಕೊರೊನಾ ಸೋಂಕು ಬಂದಿತ್ತು. ಅನಂತರ ಶ್ರವಣ ಸಮಸ್ಯೆ ಉಂಟಾಗಿದೆ. ಇದಕ್ಕೂ ಹೃದಯಕ್ಕೂ ಸಂಬಂಧವಿದೆಯೆ?
ನಿಮ್ಮದು ಹೃದಯ ಸಂಬಂಧಿ ಸಮಸ್ಯೆಯಲ್ಲ. ಫಿಸೀಶಿಯನ್‌/ಇಎನ್‌ಟಿ ವೈದ್ಯರ ಸಲಹೆಯನ್ನು ಪಡೆಯಬೇಕು. ಅಲರ್ಜಿ ಸಮಸ್ಯೆ ಇರಬಹುದಾದ ಕಾರಣ ಅಲರ್ಜಿ ತಜ್ಞರನ್ನು ಸಂಪರ್ಕಿಸಿ.

-ಅಬ್ದುಲ್‌ ಖಾದರ್‌ ವಿಟ್ಲ, ನವಾಜ್‌ ಪುತ್ತೂರು
 ಎಡ ಭಾಗ ನೋವು ಇದೆ. ಇಸಿಜಿಯಲ್ಲಿ ಸಮಸ್ಯೆ ಇಲ್ಲ.
ಇಜಿಸಿ ವರದಿ ನಾರ್ಮಲ್‌ ತೋರಿಸಿದರೂ ಬ್ಲಾಕ್‌ ಇಲ್ಲ ಎನ್ನಲಾಗದು. ಇಕೊ, ಟಿಎಂಟಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

-ಯಶವಂತ ಸುರತ್ಕಲ್‌
27 ವರ್ಷ. ಹೃದಯದಲ್ಲಿ ನೋವು ಇದೆ. ವರದಿಯಲ್ಲಿ ನಾರ್ಮಲ್‌ ಇದೆ. ಪರಿಹಾರವೇನು?
30ರಿಂದ 60 ನಿಮಿಷ ವಾಕಿಂಗ್‌ ಮಾಡಬೇಕು.

-ಅರುಣ ಶೆಟ್ಟಿ ಬೆಳ್ತಂಗಡಿ
75 ವರ್ಷದ ತಂದೆಗೆ ಹೃದಯ ಸಂಬಂಧಿತ ಸಮಸ್ಯೆ ಇದೆ. ಈಗ ಬೈಪಾಸ್‌ ಸರ್ಜರಿ ಮಾಡಬಹುದೆ?
ದೈಹಿಕವಾಗಿ ಸಕ್ರಿಯವಾಗಿದ್ದರೆ ಬೈಪಾಸ್‌ ಸರ್ಜರಿ ಮಾಡಬಹುದು.

-ವಾದಿರಾಜ ಭಟ್‌ ಸುರತ್ಕಲ್‌
 ಬೆಳಗ್ಗಿನ ಹೊತ್ತು ಹೃದಯಾಘಾತಗಳು ಹೆಚ್ಚಿಗೆ ಸಂಭವಿಸುತ್ತದೆಯೆ? ನಿಯಂತ್ರಣ ಕ್ರಮಗಳೇನು?
ಬೆಳಗ್ಗಿನ ಹೊತ್ತು ಹೃದಯಾಘಾತವಾಗುವುದು ಹೆಚ್ಚು. ಅದರಲ್ಲೂ ಪುರುಷರಿಗೆ ಹೆಚ್ಚು. 65 ವರ್ಷಕ್ಕಿಂತ ಮೇಲ್ಪಟ್ಟ ಪುರುಷ, ಮಹಿಳೆಯರಿಗೂ ಆಗುತ್ತದೆ. ಬೆಳಗ್ಗಿನ ಹೊತ್ತು ಮಲಗಿರುವುದರಿಂದ ರಕ್ತ ಹೆಪ್ಪುಗಟ್ಟಿರುತ್ತದೆ. ಬೆಳಗ್ಗೆ ದೇಹದಲ್ಲಿ ಸ್ಟಿರಾಯ್ಡ ಉತ್ಪಾದನೆಯೂ ಕಡಿಮೆ ಇರುತ್ತದೆ. ಜಿಮ್‌ನಂತಹ ದೈಹಿಕ ಚಟುವಟಿಕೆಗಳಿಗಿಂತ ವಾಕಿಂಗ್‌, ಜಾಗಿಂಗ್‌, ಈಜು, ಸೈಕ್ಲಿಂಗ್‌ ಉತ್ತಮ.

-ಸತೀಶ್‌ ಕುಂದಾಪುರ
 ಈಗ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತ ಗಳಾಗುತ್ತಿವೆಯಲ್ಲ?
ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡುತ್ತಿರುವುದು ಇದಕ್ಕೆ ಕಾರಣ. ಜತೆಗೆ ಒತ್ತಡ ಜಾಸ್ತಿ ಇದೆ. ಫಾಸ್ಟ್‌ ಫ‌ುಡ್‌ ಬಳಸುತ್ತಿದ್ದು ಇದರಲ್ಲಿ ಕೊಬ್ಬು ಮತ್ತು ಉಪ್ಪು ಹೆಚ್ಚಿಗೆ ಇರುತ್ತದೆ. ಕೊಲೆಸ್ಟ್ರಾಲ್‌ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿಗೆ ಇರುವ ಆಹಾರ, ಕಾಫಿ- ಚಹಾದಂತಹ ಪಾನೀಯ, ಆಲ್ಕೋಹಾಲ್‌ ಸೇವನೆ, ಡ್ರಗ್ಸ್‌ ಚಟ ಇತ್ಯಾದಿಗಳು ಯುವಕರಲ್ಲಿ ಹೃದಯಾಘಾತ ಹೆಚ್ಚಿಸಲು ಕಾರಣವಾಗುತ್ತದೆ.

- ಕಡಬ ದಿನೇಶ ಆಚಾರ್ಯ
 ಹೃದಯ ಸಮಸ್ಯೆಯಿಂದ ಮುಕ್ತವಾದ ಬಳಿಕ ದೈಹಿಕ ಚಟುವಟಿಕೆ ಮಾಡಬಹುದೆ?
ಸಾಧ್ಯವಾಗುವಷ್ಟು ಮಾತ್ರ ದೈಹಿಕ ಚಟುವಟಿಕೆ ನಡೆಸಬೇಕು.

-ಹುಸೇನ್‌ ಕೋಡಿಬೆಂಗ್ರೆ
 ಒಬ್ಬ ಯುವಕನಿಗೆ ಆಗಾಗ್ಗೆ ಹೃದಯದಲ್ಲಿ ನೋವು ಬರುತ್ತಿದೆ.
ಫಿಸೀಶಿಯನ್‌ರಲ್ಲಿ ತೋರಿಸುವುದು ಉತ್ತಮ.

-ರವೀಂದ್ರ ಪುತ್ತೂರು
 ರಾತ್ರಿ ಹೊತ್ತಿನಲ್ಲಿ ದಮ್‌ ಕಟ್ಟಿದರೆ ಹೃದಯ ರೋಗ ಸಂಬಂಧವಿದೆ ಎಂದರ್ಥವೆ?
ಕೆಮ್ಮು, ಕಫ‌ವಿದ್ದರೆ ಶ್ವಾಸಕೋಶದ ಸಮಸ್ಯೆ. ನಡೆಯುವಾಗ ದಮ್‌ ಕಟ್ಟಿದರೆ ಹೃದಯ ಸಂಬಂಧಿ ಎಂದರ್ಥ. ಯಾವುದಕ್ಕೂ ಪರೀಕ್ಷೆ ನಡೆಸಬೇಕು. ಈಗಾಗಲೇ ಮನೆಯಲ್ಲಿ 55 ವರ್ಷದೊಳಗಿನ ಪುರುಷರು, 65 ವರ್ಷದೊಳಗಿನ ಮಹಿಳೆಯರಿಗೆ ಹೃದಯ ರೋಗ ಸಮಸ್ಯೆ ಇದ್ದರೆ ಪರೀಕ್ಷೆ ನಡೆಸಬೇಕು.

-ಪದ್ಮಾ ಮಂಗಳೂರು
ಎಂಟು ವರ್ಷದ ಮಗುವಿಗೆ ಹೃದಯದ ಸಮಸ್ಯೆ ಇದೆ.
ಮಕ್ಕಳು ಅಳುವಾಗ ನೀಲಿ ಬಣ್ಣಕ್ಕೆ ತಿರುಗುವುದು, ಶ್ವಾಸವಾಡುವಾಗ ಕಷ್ಟವಾಗುವುದು, ಕಾಲು ಮತ್ತು ಕಣ್ಣು ದಪ್ಪ ಆಗುವುದು ಲಕ್ಷಣಗಳಾಗಿವೆ. ದೊಡ್ಡವರಿ ಗಾದರೆ ಆಡುವಾಗ, ನಡೆಯುವಾಗ ದಮ್‌ ಬರ ಬಹುದು. ಶಸ್ತ್ರಚಿಕಿತ್ಸೆ ಮಾಡಿಸ ಬೇಕಾಗಬಹುದು.

- ರತ್ನಾಕರ ಶೆಟ್ಟಿ ನರಿಂಗಾನ ಬಂಟ್ವಾಳ, ರಾಕೇಶ್‌ ಕಾಪು
 ನನಗೆ ಎದೆಯ ಎಡಬದಿಯಲ್ಲಿ ಅಪರೂಪದಲ್ಲಿ ಸೂಜಿ ಚುಚ್ಚಿದಂತೆ ನೋವಾಗುತ್ತದೆ. ಗ್ಯಾಸ್ಟ್ರಿಕ್‌ ಸಮಸ್ಯೆ ಮತ್ತು ಹೃದಯ ಸಮಸ್ಯೆಗೆ ಸಂಬಂಧವಿದೆಯೆ?
ಒಂದೇ ಕಡೆ ಚುಚ್ಚಿದ ಅನುಭವವಾದರೆ ಹೃದಯದ ಸಮಸ್ಯೆ ಇಲ್ಲ. ಎದೆ ನೋವು, ನಡೆಯು ವಾಗ ಎದೆ ನೋವು ಒಟ್ಟಿನಲ್ಲಿ ದವಡೆಗಿಂತ ಕೆಳಗೆ, ಹೊಕ್ಕಳಿಗಿಂತ ಮೇಲೆ ನೋವಿನ ಅನುಭವವಾದರೆ ಹೃದಯದ ಸಮಸ್ಯೆ ಎಂದು ಪರಿಗಣಿಸಿ ಟಿಎಂಟಿ ಪರೀಕ್ಷೆ ಮಾಡಿಸಬೇಕು. ಗ್ಯಾಸ್ಟ್ರಿಕ್‌ ಸಮಸ್ಯೆ ಜಾಸ್ತಿಯಾದರೆ ಹೃದಯದ ಸಮಸ್ಯೆ ಬರಬಹುದು. ಇಸಿಜಿ ಮಾಡಿ ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next