ಬಾಗಲಕೋಟೆ: ಪ್ರತಿ ವರ್ಷ ಮಳೆಗಾಲದಲ್ಲಿ ತುಂಬುವ ಘಟಪ್ರಭೆ ನದಿಗೆ ಸರ್ಕಾರದ ವತಿಯಿಂದ ಬಾಗಿನ ಅರ್ಪಿಸಿ, ವರ್ಷವಿಡೀ ರೈತ ಕುಲವ ಕಾಪಾಡುವಂತೆ ಪ್ರಾರ್ಥಿಸಬೇಕು. ಈ ಕಾರ್ಯಕ್ಕಾಗಿ ಹಲವು ವರ್ಷಗಳಿಂದ ಒತ್ತಾಯಿಸಿದರೂ, ಘಟಪ್ರಭಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ಎಲ್ಲಾ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮುರನಾಳ ಮಳೇರಾಜೇಂದ್ರ ಸ್ವಾಮೀಜಿ ವಿಷಾದಿಸಿದರು.
ತಾಲೂಕಿನ ನೀರಲಕೇರಿಯ ಬಾಳಮ್ಮ ಶಿಕ್ಕೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ದಿ.ಬಸಣೆಪ್ಪ ಬಾಳಿಕಾಯಿ ಪ್ರತಿಷ್ಠಾನದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದತ್ತು ಸ್ವೀಕಾರ ಹಾಗೂ ಕಡು ಬಡವರಿಗೆ ಆಹಾರ ಧಾನ್ಯ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರೈತ ಮುಖಂಡ ಶಶಿಕಾಂತ ಬಾಳಿಕಾಯಿ ತಮ್ಮ ತಂದೆಯ ಹೆಸರಿನ ಪ್ರತಿಷ್ಠಾನದ ಮೂಲಕ ಪ್ರತಿವರ್ಷ ತಮ್ಮ ಸ್ವಂತ ಖರ್ಚಿನಲ್ಲಿ ಘಟಪ್ರಭಾ ನದಿಗೆ ಬಾಗಿನ ಅರ್ಪಿಸುವ ಕೆಲಸ ಮಾಡುತ್ತಾರೆ. ಒಂದು ಸರ್ಕಾರ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದು, ಜತೆಗೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಕಡು ಬಡವರಿಗೆ ಆಹಾರ ಧಾನ್ಯ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಶ್ರೀಶೈಲ ಕೆ. ಬಿರಾದಾರ ಮಾತನಾಡಿ, ಸಮಾಜದಲ್ಲಿ ಎಷ್ಟೋ ಜನ ಶ್ರೀಮಂತರಿದ್ದಾರೆ. ಆದರೆ, ಅವರೆಲ್ಲ ಬಡವರ ನೆರವಿಗೆ ಬರುವುದಿಲ್ಲ. ಕೆಲವೇ ಕೆಲವರು ಮಾತ್ರ ನಿರ್ಗತಿಕರ, ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಬಾಳಿಕಾಯಿ ಪ್ರತಿಷ್ಠಾನದಿಂದ ಶೈಕ್ಷಣಿಕ ನೆರವು ಪಡೆದ ವಿದ್ಯಾರ್ಥಿಗಳು ಸತತ ಅಧ್ಯಯನದ ಮೂಲಕ ಸಾಧನೆ ಮಾಡಬೇಕು ಎಂದರು.
ನೀರಲಕೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್.ಆರ್. ಇಂಗಳಗಿ ಮಾತನಾಡಿ, ಇಂದು ಸಂಸ್ಕೃತಿ- ಸಂಸ್ಕಾರ ಮರೆಯುತ್ತಿದ್ದೇವೆ. ಕುಟುಂಬದ ಹಿರಿಯರ ಹೆಸರಿನಲ್ಲಿ ಬಡವರ ಸೇವೆ ಮಾಡುತ್ತಿರುವ ಶಶಿಕಾಂತ ಬಾಳಿಕಾಯಿ ಅವರ ಕಾರ್ಯ ಮಾದರಿಯಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡದ ನೀಲಕಂಠ ಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕೃರಣ ಸಂಘದ ಉಪಾಧ್ಯಕ್ಷ, ಎಸ್‌ಡಿಎಂಸಿ ಅಧ್ಯಕ್ಷ ರಾಯನಗೌಡ ಗೌಡರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹೇಶ ಅಂಗಡಿ, ಕೆನಡಾದ ಮ್ಯಾನಿಟೋಬಾ ವಿವಿಯ ಪ್ರಾಧ್ಯಾಪಕ ಡಾ|ವಿಜಯ ಚಿಟ್ನಿಸ್, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಬೇವೂರಿನ ನಿರ್ಗತಿಕ ಮಕ್ಕಳ ಕುಟೀರದ ವಿದ್ಯಾರ್ಥಿ ರುದ್ರಗೌಡ ದ್ಯಾಪುರ, ನೀರಲಕೇರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀದೇವಿ ಮಜ್ಜಗಿ ಅವರನ್ನು ಸನ್ಮಾನಿಸಲಾಯಿತು. ಪ್ರೀತಿ ಪೂಜಾರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಭಾರಿ ಮುಖ್ಯಾಧ್ಯಾಪಕ ಎಂ.ಎ. ಮುಲ್ಲಾ ಸ್ವಾಗತಿಸಿದರು. ನಿವೃತ್ತ ಮುಖ್ಯಾಧ್ಯಾಪಕ ಬಿ.ಎಚ್. ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎ.ಎಸ್. ನಡುವಿನಮನಿ ವಂದಿಸಿದರು.