ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗಾಗಿ ಸುದೀರ್ಘ ನಾಲ್ಕು ದಿನಗಳ ಕಾಲ ಮಾತುಕತೆ, ಚರ್ಚೆ ನಡೆಸಿದ ನಂತರ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಂತೆ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಪರಿಗಣಿಸಲ್ಪಟ್ಟ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಗದ್ದುಗೆ ಏರಲು ಸಮ್ಮತಿ ಸೂಚಿಸಿದ್ದಾರೆ. ಈ ಕುರಿತು ಎನ್ ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ, ನಾನು ಹೈಕಮಾಂಡ್ ನಿರ್ಧಾರವನ್ನು ಕೋರ್ಟ್ ತೀರ್ಪಿನಂತೆ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಬ್ಯಾನರಿಗೆ ಚಪ್ಪಲಿ ಹಾರ ಪ್ರಕರಣ: ಇಬ್ಬರು ಪೊಲೀಸರ ಅಮಾನತು, DySP ವಿರುದ್ಧ ಇಲಾಖಾ ತನಿಖೆ
ಮುಖ್ಯಮಂತ್ರಿ ಆಯ್ಕೆ ವಿಚಾರವನ್ನು ಹೈಕಮಾಂಡ್ ನಿರ್ಧರಿಸಿದೆ. ಇದು ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾನು ಹೈಕಮಾಂಡ್ ನಿರ್ಧಾರವನ್ನು ಒಪ್ಪಿರುವುದಾಗಿ ಡಿಕೆಶಿ ಹೇಳಿದರು.
ಇದೊಂದು ತೀರ್ಪು…ಕೋರ್ಟ್ ನಲ್ಲಿ ಸಾಕಷ್ಟು ವಾದ ಮಂಡಿಸಿದ್ದರೂ ಕೊನೆಗೆ ನ್ಯಾಯಾಧೀಶರ ತೀರ್ಮಾನವೇ ಅಂತಿಮ, ಅದನ್ನು ನಾವು ಸ್ವೀಕರಿಸಬೇಕು ಎಂದು ಡಿಕೆಶಿ ಮಾರ್ಮಿಕವಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ನಾವು ಚುನಾವಣೆಯಲ್ಲಿ ಬಹುಮತ ಗಳಿಸದೇ ಇದ್ದಲ್ಲಿ, ನಮಗೇನು ಸ್ಥಾನಮಾನ ಸಿಗುತ್ತಿತ್ತು? ನಾವು ಚುನಾವಣೆಯಲ್ಲಿ ಪ್ರಚಂಡ ಜಯಗಳಿಸಿದ್ದೇವೆ. ನಮಗೆ ಜನಾದೇಶ ದೊರಕಿರುವುದು ನನ್ನೊಬ್ಬನಿಂದ ಮಾತ್ರವಲ್ಲ. ಲಕ್ಷಾಂತರ ಕಾರ್ಯಕರ್ತರ ಶ್ರಮವಿದೆ. ಅವರ ಶ್ರಮದ ಬಗ್ಗೆಯೂ ನಾವು ಗಮನಹರಿಸಬೇಕಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಗುರುವಾರ ನವದೆಹಲಿಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸಿದ್ದರಾಮಯ್ಯ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಹಾಗೂ ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗಿತ್ತು. ಇದರೊಂದಿಗೆ ಕಳೆದ ಐದು ದಿನಗಳ ಕಾಲದ ಸಿಎಂ ಆಯ್ಕೆ ಬಿಕ್ಕಟ್ಟಿಗೆ ತೆರೆಬಿದ್ದಂತಾಗಿತ್ತು.