Advertisement

ಮನೆಗಳ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಿ

09:29 PM Jan 21, 2020 | Lakshmi GovindaRaj |

ಹಾಸನ: ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರ “ಎ’ ಮತ್ತು “ಬಿ’ ಕೆಟಗರಿಯ ಮನೆಗಳಿಗೆ ಎರಡನೇ ಹಂತದ ಹಣ ಬಿಡುಗಡೆ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಬೇಕು ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ ಅವರು ಹೇಳಿದರು.

Advertisement

ವಿಡಿಯೋ ಸಂವಾದ: ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಅವರು, ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣ, ಮೂಲ ಸೌಕರ್ಯಗಳ ದುರಸ್ತಿ ಮತ್ತು ಪುನರ್‌ ನಿರ್ಮಾಣ ಪ್ರಗತಿಯಯ ಮಾಹಿತಿ ಪಡೆದರು. ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಇನ್‌ಪುಟ್‌ ಸಬ್ಸಿಡಿ ವಿತರಿಸುವ ಬಗ್ಗೆ ಮತ್ತು 2020-21 ನೇ ಸಾಲಿನಲ್ಲಿ ನಡೆಯಲಿರುವ ಜನಗಣತಿಯ ಪೂರ್ವ ತಯಾರಿಯ ಬಗ್ಗೆಯೂ ಸಲಹೆ ಸೂಚನೆಗಳನ್ನು ನೀಡಿದರು.

ಸಂತ್ರಸ್ತರ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಎ ಕೆಟಗರಿಯ 184 ಮನೆಗಳಲ್ಲಿ ಮತ್ತು ಬಿ ಕೆಟಗರಿಯ 975 ಮನೆಗಳಿದ್ದು, ಅವುಗಳ ಜಿಪಿಎಸ್‌ ಅಪ್‌ಲೋಡ್‌ ಮಾಡಿ ಎರಡನೇ ಹಂತದ ಹಣ ಬಿಡುಗಡೆ ಮಾಡಿ ಕಾಮಗಾರಿ ಮುಂದುವರಿಸುವಂತೆ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಮೂಲ ಸೌಕರ್ಯಕ್ಕಾಗಿ ಹಣ ಬಿಡುಗಡೆ: ಮೂಲ ಸೌಕರ್ಯಗಳ ಪುನರ್‌ ನಿರ್ಮಾಣಕ್ಕಾಗಿ ಹಣ ಬಿಡುಗಡೆಯಾಗಿದ್ದು, ಸಣ್ಣ ನೀರಾವರಿ, ಪಿಆರ್‌ಇಡಿ, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ಹಾಗೂ ಗ್ರಾಮೀಣ ರಸ್ತೆ ದುರಸ್ತಿ ಕಾರ್ಯಗಳಿಗೆ ಸಂಪೂರ್ಣವಾಗಿ ಹಣ ಬಳಕೆ ಮಾಡಿಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು. ಪ್ರವಾಹದಿಂದ ಹಾನಿಗೊಳಗಾದ ರೈತರ ಬೆಳೆಗೆ ಸರ್ಕಾರದಿಂದ ಇನ್‌ಪುಟ್‌ ಸಬ್ಸಿಡಿ ಹಂತಹಂತವಾಗಿ ಬಿಡುಗಡೆಯಾಗಲಿದೆ. ಶಾಲೆ ಮತ್ತು ಅಂಗನವಾಡಿಗಳ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್ಥಿಕ ಗಣತಿಗೆ ಪೂರ್ವ ಸಿದ್ಧತೆ ಮಾಡಿ: 2021ರಲ್ಲಿ ನಡೆಯಲಿರುವ ಆರ್ಥಿಕ ಗಣತಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಾರಿಯ ಜನಗಣತಿಯನ್ನು ಮೊಬೈಲ್‌ ಆ್ಯಪ್‌ ಮೂಲಕ ನಡೆಸುತ್ತಿದ್ದು, ಗಣತಿದಾರರಿಗೆ ಹೆಚ್ಚಿನ ಸಂಭಾವನೆ ದೊರೆಯಲಿದೆ ಎಂದೂ ಟಿ.ಕೆ.ಅನಿಲ್‌ ಅವರು ಮಾಹಿತಿ ನೀಡಿದರು.

Advertisement

ಅರೆಕಾಲಿಕ ಗಣತಿದಾರರ ನೇಮಕ: ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 38 ಹಾಗೂ ಪಟ್ಟಣ ಪ್ರದೇಶದಲ್ಲಿ 12 ಸೇರಿದಂತೆ ಒಟ್ಟು 50 ಬ್ಲಾಕುಗಳಿವೆ. ಅವುಗಳಿಗೆ ಅರೆಕಾಲಿಕ ಗಣತಿದಾರರನ್ನು ನೇಮಿಸಲಾಗುವುದು. ಗಣತಿದಾರರಿಗೆ ಜಿಲ್ಲಾ ಮಟ್ಟದಲ್ಲಿ ಫೆ.3ರಂದು ತರಬೇತಿ¿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಸ್ಪಷ್ಪಪಡಿಸಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಚಂದ್ರಶೇಖರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ‌ ಬಿ.ಎ. ಜಗದೀಶ್‌, ಪಿಆರ್‌ಇಡಿ ಕಾರ್ಯಪಾಲಕ ಎಂಜಿನಿಯರ್‌ ಆನಂದ್‌ಕುಮಾರ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸಿ.ಎಸ್‌.ಮಂಜು, ಜನಗಣತಿಯ ಜಿಲ್ಲಾ ನೋಡಲ್‌ ಅಧಿಕಾರಿ ದಿವಾಕರ್‌, ಶಿರಸ್ತೆದಾರರಾದ ರಮೇಶ್‌ ಅವರು ಸಭೆಯಲ್ಲಿ ಹಾಜರಿದ್ದರು.

ದುರಸ್ತಿ ಕಾಮಗಾರಿ ಶೀಘ್ರ ಆರಂಭಿಸಿ: ವಿಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಶಾಲೆ ಮತ್ತು ಅಂಗನವಾಡಿಗಳ ದುರಸ್ತಿ -ಪುನರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ 752 ಕಾಮಗಾರಿಗಳಲ್ಲಿ 98 ಪೂರ್ಣಗೊಂಡಿವೆ. 639 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಉಳಿದ 15 ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸಬೇಕೆಂದು ಪಿಆರ್‌ಇಡಿ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು.

ಜನಗಣತಿ ಮೇಲ್ವಿಚಾರಕರ ಆಯ್ಕೆ ಪಟ್ಟಿ ತಯಾರಿಸಿ: 2020-21ರಲ್ಲಿ ನಡೆಯಲಿರುವ ಜನಗಣತಿಗೆ ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿ ಮಾಡಲು ಆಯ್ಕೆ ಪಟ್ಟಿ ತಯಾರಿಸಬೇಕು ಎಂದು ಜನಗಣತಿಯ ಜಿಲ್ಲಾ ನೋಡಲ್‌ ಅಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು ಸರ್ಕಾರಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next