Advertisement

ರೈಲ್ವೆ ಸೇತುವೆ ಕಾಮಗಾರಿ ತ್ವರಿತಗೊಳಿಸಿ

06:02 AM Jun 23, 2020 | Suhan S |

ಹುಬ್ಬಳ್ಳಿ: ಉಣಕಲ್ಲ-ಮಾರಡಗಿ ಹಾಗೂ ಉಣಕಲ್ಲ-ಹೆಬ್ಬಳ್ಳಿ ರಸ್ತೆಯಲ್ಲಿ ನೈರುತ್ಯ ರೈಲ್ವೆ ವಲಯದಿಂದ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದು, ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸೂಚಿಸಿದರು.

Advertisement

ಸೋಮವಾರ ಸರ್ಕಿಟ್‌ಹೌಸ್‌ನಲ್ಲಿ ನೈರುತ್ಯ ರೈಲ್ವೆ ವಲಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈಲ್ವೆ ಅಂಡರ್‌ ಬ್ರಿಡ್ಜ್ಗಿಂತ ರೈಲ್ವೆ ಓವರ್‌ ಬ್ರಿಡ್ಜ್ ನಿರ್ಮಿಸುವುದು ಸೂಕ್ತ. ಇದರಿಂದ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುವುದನ್ನು ತಡೆಯಬಹುದಾಗಿದೆ. ಈ ದಿಸೆಯಲ್ಲಿ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ಅವರೊಂದಿಗೆ ಚರ್ಚಿಸಿದ್ದು, ಅವರು ಕೂಡ ಕಾಮಗಾರಿ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆಂದರು.

ರೈಲು ಕೆಳ ಸೇತುವೆ ನಿರ್ಮಿಸಿದ ಹಲವೆಡೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಮೆಲ್ಸೇತುವೆ ನಿರ್ಮಿಸಲಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ 7.5 ಮೀ. ಅಗಲ ರಸ್ತೆ ನಿರ್ಮಿಸಲು ಆದ್ಯತೆ ನೀಡಬೇಕು ಎಂದರು.

ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದ ಸಮೀಪ ರೈಲ್ವೆ ಅಂಡರ್‌ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದು, ಉಣಕಲ್ಲ ನಿಲ್ದಾಣದಿಂದ ಟಿಂಬರ್‌ಯಾರ್ಡ್‌ ಮೂಲಕ ಸಂಚರಿಸುವವರಿಗಾಗಿ ರೈಲು ನಿಲ್ದಾಣ ಬಳಿ ಅಂಡರ್‌ ಪಾಸ್‌ ಮಾಡಲು ನಿರ್ಧರಿಸಿದ್ದು, ಕಾಮಗಾರಿಗೆ ಶೀಘ್ರದಲ್ಲೇ ಭೂಮಿ ಪೂಜೆ ನಡೆಸಲಾಗುವುದು ಎಂದರು.

Advertisement

ಕೋವಿಡ್ ಲಾಕ್‌ಡೌನ್‌ ಕಾರಣದಿಂದ ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಆದ್ದರಿಂದ ರಾಜ್ಯ ಸರಕಾರದ ಪಾಲನ್ನು ನಿರೀಕ್ಷಿಸದೇ ರೈಲ್ವೆ ಡಬ್ಲಿಂಗ್‌ ಯೋಜನೆಯಡಿ ನೈರುತ್ಯ ರೈಲ್ವೆ ಬ್ರಿಡ್ಜ್ ಹಾಗೂ ಅಪ್ರೋಚಿಂಗ್‌ ರಸ್ತೆಗಳನ್ನು ನಿರ್ಮಿಸಬೇಕು. ಈ ಕುರಿತು ಸಚಿವ ಸುರೇಶ ಅಂಗಡಿಯವರೊಂದಿಗೆ ಚರ್ಚಿಸುತ್ತೇನೆಂದು ನುಡಿದರು.

ಬ್ರಿಡ್ಜ್ ನಿರ್ಮಿಸುವುದರೊಂದಿಗೆ ಅಪ್ರೋಚ್‌ ರಸ್ತೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರ ರಸ್ತೆ ನಿಧಿಯ ಹಣ ಮಂಜೂರಾಗಿದ್ದು, ಲೋಕೋಪಯೋಗಿ ಇಲಾಖೆ ಕೂಡಲೇ ಅರ್ಧಕ್ಕೆ ನಿಂತಿರುವ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು. ಹುಬ್ಬಳ್ಳಿ-ನೂಲ್ವಿ ರಸ್ತೆಯಲ್ಲಿ ಬೆಳಗಲಿ ಕ್ರಾಸ್‌ನಲ್ಲಿ ಅಂಡರ್‌ ಬ್ರಿಡ್ಜ್ ನಿರ್ಮಿಸುವುದು ಅವಶ್ಯಕತೆಯಿದೆ ಎಂದು ಅಲ್ಲಿನ ಜನರು ಮನವಿ ಮಾಡಿದ್ದಾರೆ. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ನೂಲ್ವಿಯಲ್ಲಿ ಕೇಂದ್ರ ರಸ್ತೆ ನಿಧಿಯಡಿ ಕಾಂಕ್ರೀಟ್‌ ರಸ್ತೆ ನಿರ್ಮಾಣದಿಂದ ಅಕ್ಕ-ಪಕ್ಕದ ಮನೆಗಳಿಗೆ ನೀರು ನುಗ್ಗುವುದರಿಂದ ಅಲ್ಲಿನ ನಿವಾಸಿಗಳು ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ರಸ್ತೆಯೊಂದಿಗೆ ಚರಂಡಿ ಕೂಡ ನಿರ್ಮಿಸಬೇಕು ಎಂದರು.

ಕೇಂದ್ರ ರಸ್ತೆ ನಿಧಿಯಡಿ ಕೈಗೊಂಡ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ರಸ್ತೆ ಮಧ್ಯದ ಗುಂಡಿಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ರೈಲ್ವೆ ಅಧಿಕಾರಿಗಳಾದ ವಿನಾಯಕ ಪಾಲನಕರ, ಸೂರ್ಯನಾರಾಯಣ, ಲೋಕೋಪಯೋಗಿ ಇಲಾಖೆ ಅಭಿಯಂತರ ವಿರೂಪಾಕ್ಷಪ್ಪ ಯಮಕನಮರಡಿ, ಪಾಲಿಕೆ ಮಾಜಿ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶ ಕೌಜಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next