Advertisement

Protest: ಕಂಪನಿಯ ಕಿರುಕುಳಕ್ಕೆ ಬೇಸತ್ತು ಪ್ರತಿಭಟನೆಗೆ ಮುಂದಾದ ಎಸಿಸಿ ಕಾರ್ಮಿಕರು

10:06 AM Mar 04, 2024 | Team Udayavani |

ವಾಡಿ: ಸಿಮೆಂಟ್ ಕಂಪನಿ ಆಡಳಿತ ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತು ಕಾರ್ಮಿಕರು ಕೆಲಸಕ್ಕೆ ಧಿಕ್ಕಾರ ಹೇಳಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

Advertisement

ಸೋಮವಾರ ಬೆಳಗ್ಗೆ ಎಸಿಸಿ ಸಿಮೆಂಟ್ ಕಾರ್ಖಾನೆಯ ಮುಖ್ಯ ದ್ವಾರದ ಬಳಿ ಜಮಾಯಿಸಿದ ನೂರಾರು ಜನ ಗುತ್ತಿಗೆ ಕಾರ್ಮಿಕರು, ಸ್ಥಳದಲ್ಲೇ ಸಾಮೂಹಿಕ ಸಭೆ ನಡೆಸಿ ಕೆಲಸಕ್ಕೆ ಹಾಜರಾಗದಿಲು ತೀರ್ಮಾನಿಸುವ ಮೂಲಕ ದಿಢೀರ್ ಪ್ರತಿಭಟನೆಗೆ ಮುಂದಾದರು. ಯಾವುದೇ ಕಾರ್ಮಿಕ ಸಂಘಟನೆಯ ಬೆಂಬಲವಿಲ್ಲದೆ ಸ್ವಯಂ ಸಂಘರ್ಷಕ್ಕಿಳಿದು ಶೋಷಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸಿಸಿ ಸಿಮೆಂಟ್ ಕಂಪನಿ ಆಡಳಿತ ಅದಾನಿ ತೆಕ್ಕೆಗೆ ಜಾರಿದೆ ಬಳಿಕ ಕೆಲಸದ ಒತ್ತಡ ಹೆಚ್ಚಾಗಿದೆ. ಕೆಲಸದ ವೇಳಾಪಟ್ಟಿಯಲ್ಲೂ ಅನಗತ್ಯ ಬದಲಾವಣೆ ತರಲಾಗಿದೆ. ದುಡಿತದ ಸಮಯ ಹೆಚ್ಚಿಸಲಾಗಿದೆ. ವೇತನ ಹೆಚ್ಚಳ ಕುರಿತು ಯಾವುದೇ ಚರ್ಚೆ ಇಲ್ಲ. ಈ ಮೊದಲು ನೀಡಲಾಗುತ್ತಿದ್ದ ಉಪಾಹಾರ ವ್ಯವಸ್ಥೆ ನಿಲ್ಲಿಸಲಾಗಿದೆ. ಎಂಟು ತಾಸಿನ ದುಡಿಮೆಯನ್ನು ಒಂಬತ್ತು ತಾಸಿಗೆ ಏರಿಸಲಾಗಿದೆ. ಊಟ ಮತ್ತು ವಿಶ್ರಾಂತಿಗೆ ಅಗತ್ಯ ಸಮಯ ನೀಡಲಾಗುತ್ತಿಲ್ಲ ಎಂದು ಆರೋಪ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರು, ಎಸಿಸಿ ಕಂಪನಿ ಆಡಳಿತವು ಕಾರ್ಮಿಕರ ಎಲ್ಲಾ ಸೌಲಭ್ಯಗಳನ್ನು ಕಿತ್ತುಕೊಂಡು ಶೋಷಣೆ ಮುಂದುವರೆಸಿದೆ. ಕೆಲಸದಿಂದ ತೆಗೆದು ಹಾಕುವ ದುರುದ್ದೇಶ ಹೊತ್ತು ನಿರಂತರ ಕಿರುಕುಳ ನೀಡಲಾಗಿದೆ ಎಂದು ದೂರಿದ್ದಾರೆ. ಕಂಪನಿ ಆಡಳಿತದ ಅಧಿಕಾರಿಗಳು ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವ ವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾರ್ಮಿಕರ ಧರಣಿ ಮುಂದು ವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next