Advertisement

ಆರು ಅಧಿಕಾರಿಗಳಿಗೆ ಎಸಿಬಿ ಶಾಕ್‌ : 24 ಕಡೆ ದಾಳಿ 

10:40 AM Mar 21, 2018 | Team Udayavani |

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಆರು ಮಂದಿ ಸರಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಿಸಿಮುಟ್ಟಿಸಿದೆ. ದಾವಣಗೆರೆ ನಗರಾಭಿವೃದ್ಧಿ  ಪ್ರಾಧಿಕಾರ ಜಂಟಿ ನಿರ್ದೇಶಕ ಗೋಪಾಲಕೃಷ್ಣ, ಕಳಸದ ಕಂದಾಯ ನಿರೀಕ್ಷಕ, ಪ್ರಭಾರ ತಹಶೀಲ್ದಾರ್‌ ಕೀರ್ತಿ ಜೈನ್‌ ಸಹಿತ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಇಲಾಖೆಗಳ ಆರು ಮಂದಿ ಅಧಿಕಾರಿಗಳಿಗೆ ಸೇರಿದ ಕಚೇರಿ, ನಿವಾಸಗಳು, ಸಂಬಂಧಿಕರ ಮನೆಗಳ ಮೇಲೆ ಮಂಗಳವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿ ದಾಖಲೆಗಳ ಪರಿಶೀಲನೆ ನಡೆಸಿ ವಶಕ್ಕೆ ಪಡೆದರು.

Advertisement

ಆರೋಪಿ ಅಧಿಕಾರಿಗಳಿಗೆ ಸೇರಿದ ದಾವಣಗೆರೆ, ತುಮಕೂರು, ಚಿತ್ರದುರ್ಗ, ಬೀದರ್‌, ಕಲಬುರಗಿ, ಬೆಂಗಳೂರು, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿನ ಕಚೇರಿ, ನಿವಾಸ ಸಹಿತ ಒಟ್ಟು 24 ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಆರೋಪಿತರು ಅಕ್ರಮ ಆಸ್ತಿ ಹೊಂದಿದ ಬಗ್ಗೆ ವಿಶ್ವಾಸಾರ್ಹ ಮೂಲಗಳ ಮಾಹಿತಿ ಆಧರಿಸಿ ಅವರಿಗೆ ಸೇರಿರುವ ನಿವಾಸಗಳು ಹಾಗೂ ಕಚೇರಿಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಅಕ್ರಮ  ಆಸ್ತಿ ಹೊಂದಿದ ಬಗ್ಗೆ ಮತ್ತಷ್ಟು ದಾಖಲೆಗಳಲ್ಲಿ ಖಚಿತವಾಗಬೇಕಿದ್ದು,  ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.

ದಾಳಿಗೊಳಗಾದ ಅಧಿಕಾರಿಗಳು ಹಾಗೂ ದಾಳಿ ನಡೆಸಿದ ಸ್ಥಳಗಳು
1. ಗೋಪಾಲಕೃಷ್ಣ- ಜಂಟಿ ನಿರ್ದೇಶಕ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಪ್ರಭಾರ ಆಯುಕ್ತ ( ದಾವಣಗೆರೆಯ ಅವರ ನಿವಾಸ ಹಾಗೂ ಎರಡೂ ಕಚೇರಿ)
2. ತಿಪ್ಪೇಸ್ವಾಮಿ –  ಸಹಾಯಕ ಆಯುಕ್ತ, ತುಮಕೂರು ಉಪವಿಭಾಗ  ( ತುಮಕೂರಿನ ನಿವಾಸ ಹಾಗೂ ಕಚೇರಿ, ಚಿತ್ರದುರ್ಗದ ಬೆಳಘಟ್ಟದ ನಿವಾಸ)
3. ವಿಜಯ್‌ ಕುಮಾರ್‌ ಮಾಶೆಟ್ಟಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ , ಕಾರಂಜ ಉಪಕಾಲುವೆ ಯೋಜನೆ, ಹುಮ್ನಾಬಾದ್‌, ( ಹುಮ್ನಾಬಾದ್‌ ಕಚೇರಿ ಹಾಗೂ ಮನೆ, ಬೀದರ್‌ನ ನಿವಾಸ)
4. ಕಿರಣ್‌ ಸುಬ್ಟಾರಾವ್‌ ಭಟ್‌ -ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆ ( ಕಚೇರಿ, ಬೆಳಗಾವಿಯಲ್ಲಿರುವ ಎರಡು ನಿವಾಸ, ಬೆಂಗಳೂರಿನ ಬನಶಂಕರಿಯಲ್ಲಿರುವ ನಿವಾಸ, ಉತ್ತರಕನ್ನಡ ಜಿಲ್ಲೆಯ ಹಸುರುಗೋಡುವಿನ ಮನೆ)
5. ಶ್ರೀಪತಿ ದೊಡ್ಡಲಿಂಗಣ್ಣವರ್‌ – ಉಪಮುಖ್ಯ ಭದ್ರತೆ ಹಾಗೂ ಜಾಗೃತಾಧಿಕರಿ, ಕೆಆರ್‌ಟಿಸಿ, ಕಲಬುರಗಿ (ಕಚೇರಿ, ಕಚೇರಿ, ಧಾರವಾಡದಲ್ಲಿ ಹೊಂದಿರುವ ಎರಡು ಮನೆ)
6. ಕಳಸಾ ಹೋಬಳಿ (ಕಚೇರಿ, ನಿವಾಸ, ಉಜಿರೆ,  ಮೂಡಿಗೆರೆ ತಾಲೂಕಿನ ಸಂಸೆಯಲ್ಲಿರುವ ನಿವಾಸಗಳು)

Advertisement

Udayavani is now on Telegram. Click here to join our channel and stay updated with the latest news.

Next