ಧಾರವಾಡ : ನಾಲ್ಕನೇ ದರ್ಜೆ ಗುತ್ತಿಗೆದಾರರ ಲೈಸನ್ಸ್ ಮಾಡಿಕೊಡಲು ಲಂಚದ ಬೇಡಿಕೆಯಿಟ್ಟಿದ್ದ ಪಂಚಾಯತ್ ರಾಜ್ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಧಾರವಾಡದಲ್ಲಿ ಮಂಗಳವಾರ ನಡೆದಿದೆ.
ಧಾರವಾಡ ಎಸಿಬಿ ಡಿವೈಎಸ್ಪಿ ವೇಣುಗೋಪಾಲ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಎಂಜಿನಿಯರ್ ಮನೋಹರ ಮಂಡೋಲಿ ಎಂಬುವರನ್ನು ಅವರ ಕಚೇರಿಯಲ್ಲಿಯೇ ಬಲೆಗೆ ಕೆಡವಿದ್ದಾರೆ.
ಕಲಘಟಗಿಯ ಕಲ್ಲಪ್ಪ ಶಿರಬಡಗಿ ಎಂಬುವರಿಗೆ 4ನೇ ದರ್ಜೆ ಗುತ್ತಿಗೆದಾರ ಪರವಾನಿಗೆ ಮಾಡಿಸಲು ಲಂಚದ ಬೇಡಿಕೆಯಿಟ್ಟಿದ್ದರಿಂದ ಅವರು ಹಲವು ಬಾರಿ ಅಲೆದಾಡಿ ಬೇಸತ್ತಿದ್ದರು. ಇದರಿಂದ ನೊಂದ ಗುತ್ತಿಗೆದಾರ ಭ್ರಷ್ಟಾಚಾರ ನಿಗ್ರಹ ದಳದ ಮೊರೆ ಹೋಗಿದ್ದರು. ಅವರು ನೀಡಿದ ದೂರಿನ ಆಧಾರದ ಮೇಲೆ ಲಂಚ ಪಡೆಯುತ್ತಿದ್ದಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೋಹರ ಅವರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಜ್ಯೋತಿಷಿಗಳ ಬದಲು ಜನರ ನಾಡಿಮಿಡಿತ ಅರಿತಿದ್ದರೆ ಹೀಗಾಗುತ್ತಿರಲಿಲ್ಲ : ಸುಧಾಕರ್
ಇವರ ವಿರುದ್ದ ಭ್ರಷ್ಟ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಮನೋಹರ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.