ಉಡುಪಿ: ಆದಾಯ ತೆರಿಗೆ (ಐಟಿ) ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಸಿಬಿಯನ್ನು ಛೂ ಬಿಡುತ್ತಿದೆ. ರಾಜ್ಯ ಸರಕಾರ ಭ್ರಷ್ಟಾಚಾರವನ್ನು ರಕ್ಷಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಐಟಿ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ವರ್ಗಾವಣೆಯಾಗಿ ಬರುವವರು. ಏನಾದರೂ ದೂರುಗಳಿದ್ದರೆ ಕೇಂದ್ರ ಸರಕಾರಕ್ಕೆ ಸಲ್ಲಿಸುವುದು ಅಥವಾ ಸಿಬಿಐ ಮೂಲಕ ತನಿಖೆ ನಡೆಸುವ ಪ್ರಸ್ತಾವ ಸಲ್ಲಿಸುವ ಬದಲು ಅವರ ವಿರುದ್ಧ ಎಸಿಬಿಯನ್ನು ಛೂ ಬಿಡುವುದು ಸರಕಾರಕ್ಕೆ ಅವಮಾನ ಎಂದರು.
ಭಂಡ ಸರಕಾರ: ಸಿದ್ದರಾಮಯ್ಯನವರ ಸರಕಾರ ಭಂಡ ಸರಕಾರವಾಗಿದೆ. ನೋಟು ಅಪಮೌಲ್ಯಗೊಳಿಸಿದ ಬಳಿಕ ಲೆಕ್ಕಪತ್ರ ಇಡದವರ ಮೇಲೆ ಐಟಿ, ಇಡಿ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕಪತ್ರ ಕೇಳಿದ್ದಾರೆ. ಕೇಂದ್ರ ಸರಕಾರ ಇನ್ನಷ್ಟು ಪ್ರಾಮಾಣಿಕ ಅಧಿಕಾರಿಗಳನ್ನು ರಾಜ್ಯಕ್ಕೆ ನಿಯೋಜಿಸಿ ತೆರಿಗೆ ಮೋಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶೋಭಾ ಆಗ್ರಹಿಸಿದರು.
ಹಿಂದೆ ಇದ್ದ ಸಿಮಿ ಈಗ ಪಿಎಫ್ಐ, ಕೆಎಫ್ಡಿ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಐಸಿಸ್ ಸಕ್ರಿಯವಾಗಿರುವ ಬಗೆಗೆ ಮಾಹಿತಿಗಳು ಇವೆ. ನಾನು ಹಿಂದೆ ಲವ್‌ಜೆಹಾದ್ ಹೆಸರಿನಲ್ಲಿ ಪಿಎಫ್ಐ, ಕೆಎಫ್ಡಿ ನಡೆಸುತ್ತಿರುವ ಅಕ್ರಮಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಿ ರಾಷ್ಟ್ರೀಯ ತನಿಖಾ ದಳದ ಕಚೇರಿಯನ್ನು ತೆರೆಯಲು ಮನವಿ ಮಾಡಿದ್ದೆ ಎಂದರು.
ದಾರಿತಪ್ಪಿಸುವ ಹೇಳಿಕೆ: ಯು.ಟಿ. ಖಾದರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಂಸದೆ, ಕೆಎಫ್ಡಿ, ಪಿಎಫ್ಐ ಸಂಪರ್ಕವಿರುವುದು ಕಾಂಗ್ರೆಸ್‌ನವರಿಗೆ, ಬಿಜೆಪಿ ನಾಯಕರಿಗಲ್ಲ. ಇದು ಖಾದರ್ ಅವರ ದಾರಿ ತಪ್ಪಿಸುವ ಹೇಳಿಕೆ. ಕಾಂಗ್ರೆಸ್ ಮುಖಂಡರು ಸಚಿವ ಸಂಪುಟದೆದುರು ಇವರ ಮೇಲೆ ಇದ್ದ ಪ್ರಕರಣಗಳನ್ನು ಹಿಂಪಡೆಯಲು ಒತ್ತಡ ತಂದ ಕಾರಣ ಈಗ ಹಲವು ಹಿಂದೂ ಮುಖಂಡರ ಕೊಲೆ ನಡೆಯಿತು ಎಂದರು.
ಪರ್ಕಳ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಹಾಳಾದ ಭಾಗವನ್ನು ದುರಸ್ತಿ ಮಾಡುವ ಕಾಮಗಾರಿ ಆರಂಭಗೊಂಡಿದೆ ಎಂದರು.