ಬೆಂಗಳೂರು: “ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ)ವನ್ನು ಹೈಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ಎಸಿಬಿಯ ಅಂತ್ಯಕ್ಕೆ ಕೊನೆಯ ಮೊಳೆ ಹೊಡೆದಿದ್ದು, 2016ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಎಸಿಬಿಯನ್ನು ರದ್ದುಪಡಿಸಿ ಸೆ.9ರಂದು ಅಧಿಕೃತ ಆದೇಶ ಹೊರಡಿಸಿದೆ.
ಹೈಕೋರ್ಟ್ ಆದೇಶ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಅದರಂತೆ ಎಸಿಬಿಯನ್ನು ರದ್ದುಪಡಿಸಲಾಗುತ್ತಿದೆ. ಅದೇ ರೀತಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಬಾಕಿ ಇರುವ ತನಿಖೆಗಳು, ವಿಚಾರಣೆ ಹಾಗೂ ಇನ್ನಿತರ ಶಿಸ್ತು ಕ್ರಮಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತಕ್ಕೆ ವರ್ಗಾಯಿಸಲಾಗುತ್ತಿದೆ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಎಸಿಬಿಯನ್ನು ರದ್ದುಪಡಿಸಿ 2022ರ ಆ.11ರಂದು ಮಹತ್ವದ ತೀರ್ಪು ನೀಡಿದ್ದ ಹೈಕೋರ್ಟ್, ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕು. ಲೋಕಾಯುಕ್ತಕ್ಕೆ ನೀಡಲಾಗಿದ್ದ ಪೊಲೀಸ್ ಠಾಣಾ ಅಧಿಕಾರವನ್ನು ಪುನರ್‌ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಆ ಹಿನ್ನೆಲೆಯಲ್ಲಿ , ಎಸಿಬಿ ರಚಿಸಿ, ಅದಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ಹಾಗೂ ರಾಜ್ಯವ್ಯಾಪಿ ಅಧಿಕಾರ ನೀಡಿ 2016ರಲ್ಲಿ ವಿವಿಧ ದಿನಾಂಕಗಳಂದು ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಸರ್ಕಾರ ಹಿಂಪಡೆದಿದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎಸಿಬಿ ರಚಿಸಲಾಗಿತ್ತು. ಆಗ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಎಸಿಬಿ ಕಿತ್ತುಹಾಕಿ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ನೀಡಲಾಗುವುದು ಎಂದು ಬಿಜೆಪಿ ಹೇಳಿತ್ತು. ಎಸಿಬಿ ರದ್ದುಪಡಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿಯೂ ಸಲ್ಲಿಸಿರಲಿಲ್ಲ. ಹೈಕೋರ್ಟ್ ಆದೇಶಕ್ಕೆ ಬದ್ಧ ಎಂದೂ ಹೇಳಿತ್ತು.