ಬೆಂಗಳೂರು: ಬಿಡಿಎ ನಿವೇಶನಗಳ ಹಂಚಿಕೆ ಹಾಗೂ ಮೃತ ಪಟ್ಟರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯಾಪಕ ಭ್ರಷ್ಟಾಚಾರ ಎಸಗುತ್ತಿದ್ದ ಆರೋಪದ ಮೇಲೆ ಶುಕ್ರವಾರ ಸಂಜೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಶನಿವಾರವೂ ಮುಂದುವರಿಯುವ ಸಾಧ್ಯತೆಯಿದೆ. ನಗರದ ವೈಯಾಲಿಕಾವಲ್‌ನಲ್ಲಿರುವ ಬಿಡಿಎ ಕಚೇರಿಯ ಮೇಲೆ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಮಾರ್ಗದರ್ಶನದಲ್ಲಿ ಮೂವರು ಎಸ್ಪಿಗಳಾದ ಅಬ್ದುಲ್ ಅಹ್ಮದ್, ಉಮಾ ಪ್ರಶಾಂತ್ ಮತ್ತು ಯತೀಶ್ ಚಂದ್ರ ನೇತೃತ್ವದ ಸುಮಾರು 80ಕ್ಕೂ ಅಧಿಕ ಮಂದಿಯ ನಾಲ್ಕು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ 9.30ರವರೆಗೆ ಕಚೇರಿಯನ್ನು ಬಂದ್ ಮಾಡಿ ಶೋಧಿಸಲಾಗಿದೆ.
ದಾಳಿ ಸಂದರ್ಭದಲ್ಲಿ ನೂರಾರು ಕೋಟಿ ರೂ. ಅವ್ಯವಹಾರದ ಕುರಿತಂತೆ ಮಾಹಿತಿ ಸಂಗ್ರಹಣೆ ಮತ್ತು ದಾಖಲೆಗಳ ಪರಿಶೀಲಿಸಲಾಗುತ್ತಿದೆ ಎಂದು ಎಸಿಬಿ ತಿಳಿಸಿದೆ. ಬಿಡಿಎ ಉಪ ಕಾರ್ಯದರ್ಶಿ ನವೀನ್ ಜೊಸೇಪ್ ಕಚೇರಿಯಲ್ಲಿ ಅಲ್ಪ ಪ್ರಮಾಣದಲ್ಲಿ ನಗದು, ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ಚಾಲಕನೊಬ್ಬನ ಕಾರಿನಲ್ಲಿ ಬಿಡಿಎಗೆ ಸಂಬಂಧಿಸಿದ ಸೀಲ್‌ಗಳು, ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಬಿಡಿಎ ಭೂ ಸ್ವಾಧೀನ ವಿಭಾಗ ಮತ್ತು ಕಾರ್ಯದರ್ಶಿಗಳ ಕಚೇರಿ ಸೇರಿ ಎಲ್ಲಾ ವಿಭಾಗಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಬಿಡಿಎಯಿಂದ ಭೂ ಸ್ವಾಧೀನ ಮಾಡಿಕೊಂಡ ಜಾಗಕ್ಕೆ ಪರ್ಯಾಯವಾಗಿ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ಹಾಗೂ ಪರಿಹಾರದ ಹಣ ನೀಡುವಲ್ಲಿ ವಿಳಂಬ ಮಾಡುತ್ತಿದ್ದರು. ಜತೆಗೆ ಮೃತಪಟ್ಟವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಹಂಚಿಕೆ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದರು. ಅಲ್ಲದೆ, ಕೆಲ ಲೇಔಟ್‌ಗಳಲ್ಲಿ ಅರ್ಹತೆ ಇಲ್ಲದಿದ್ದರೂ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಖಾಸಗಿ ಸಂಘದವರ ಜತೆಗೆ ಅಕ್ರಮವಾಗಿ ಲಾಭ ಪಡೆಯಲು ಅನುಕೂಲ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಬಗ್ಗೆ ಕೆಲ ದಿನಗಳಿಂದ ಸಾರ್ವಜನಿಕರಿಂದ ಎಸಿಬಿಗೆ ದೂರುಗಳು ಬಂದಿದ್ದವು. ಅಲ್ಲದೇ ಬಿಡಿಎ ವಿವಿಧ ವಿಭಾಗದಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ದಾಳಿ ನಡೆಸಿ ಇಡೀ ಕಚೇರಿಯನ್ನು ಪರಿಶೀಲಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಬಿಡಿಎ ಕಚೇರಿ ಮುಖ್ಯದ್ವಾರವನ್ನು ಬಂದ್ ಮಾಡಿದ ಎಸಿಬಿ ಸಿಬ್ಬಂದಿ, ಬಿಡಿಎಗೆ ಬಂದಿದ್ದ ಪ್ರತಿಯೊಬ್ಬ ಸಾರ್ವಜನಿಕರನ್ನು ಪರಿಶೀಲಿಸಿ, ವಿಚಾರಣೆ ನಡೆಸಿ ಹೊರಗಡೆ ಕಳುಹಿಸಲಾಯಿತು.