Advertisement

ಒಂದೇ ಸೂರಿನಡಿ ಗರಿಷ್ಠ ಸಾಹಿತ್ಯ ಪುಸ್ತಕ ಸಂಗ್ರಹಕ್ಕೆ ಅಕಾಡೆಮಿ ಚಿಂತನೆ

10:59 AM Sep 02, 2018 | Team Udayavani |

ಮಹಾನಗರ: ತುಳು ಭಾಷೆಯಲ್ಲಿ ಸಂಶೋಧನೆ ಮಾಡುವವರಿಗೆ, ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೇರಿದಂತೆ ವಿ.ವಿ.ಗಳಲ್ಲಿ ಪೂರಕ ಪುಸ್ತಕಗಳ ಕೊರತೆ ಇದೆ. ಇದನ್ನು ನಿವಾರಿಸಿ ಒಂದೇ ಸೂರಿನಲ್ಲಿ ಗರಿಷ್ಠ ತುಳು ಸಾಹಿತ್ಯ ಪುಸ್ತಕಗಳನ್ನು ಸಂಗ್ರಹಿಸಲು ತುಳು ಸಾಹಿತ್ಯ ಅಕಾಡೆಮಿ ಮುಂದಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ಅನೇಕರು ಮುಂದಾಗುತ್ತಿದ್ದಾರೆ. ವಿ.ವಿ. ಸಂಧ್ಯಾ ಕಾಲೇಜಿನಲ್ಲಿ ತುಳು ಭಾಷೆಯಲ್ಲಿ ಎಂ.ಎ. ತರಗತಿ ಆರಂಭವಾಗಿದೆ. ಆದರೆ ಅಲ್ಲಿನ ವಿದ್ಯಾರ್ಥಿಗಳ ಸಿಲೆಬಸ್‌ಗಳಿಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ಪಡೆಯಲು ಆಕರ ಗ್ರಂಥಗಳು ಸಿಗುತ್ತಿಲ್ಲ. ಇದಕ್ಕೆಂದು ತುಳು ಸಾಹಿತ್ಯ ಅಕಾಡೆಮಿ ಸುಮಾರು 77 ಪುಸ್ತಕಗಳ ಪಟ್ಟಿ ಮಾಡಿದ್ದು, ಆಯಾ ಪುಸ್ತಕಗಳ ಹುಡುಕಾಟದಲ್ಲಿ ನಿರತವಾಗಿದೆ.

ತುಳು ಭಾಷೆಯ ಅಧ್ಯಯನಕ್ಕೆ ಸಂಬಂಧಿಸಿದಂತೆ 40 ವರ್ಷಗಳ ಹಿಂದಿನ ಪುಸ್ತಕಗಳ ಆವಶ್ಯಕತೆಯೂ ಇದ್ದು, ಆಯಾ ಲೇಖಕರ ಪಟ್ಟಿಯನ್ನು ಈಗಾಗಲೇ ಸಂಗ್ರಹ ಮಾಡಲಾಗಿದೆ. ಜತೆಗೆ ಮೂಲ ಲೇಖಕರನ್ನು ಸಂಪರ್ಕಿಸಿ ಪುಸ್ತಕ ಸಂಗ್ರಹಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಂಥಾಲಯಗಳು ಸೇರಿದಂತೆ ಪುಸ್ತಕಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ಕೆಲವೊಂದು ಬಾರಿ ಒಂದೇ ಮುದ್ರಿತ ಪ್ರತಿ ಇದ್ದರೆ ಅದರ ಮರುಮುದ್ರಣ, ಜೆರಾಕ್ಸ್‌ ಪ್ರತಿ ಸಂಗ್ರಹವನ್ನೂ ಮಾಡಲಾಗುತ್ತಿದೆ.

5,000ಕ್ಕೂ ಅಧಿಕ ಪುಸ್ತಕ
ತುಳು ಸಾಹಿತ್ಯ ಅಕಾಡೆಮಿಯಲ್ಲಿ ಈಗಾಗಲೇ ಸುಸಜ್ಜಿತ ಗ್ರಂಥಾಲಯವಿದ್ದು, ಕನ್ನಡ, ತುಳು, ಇಂಗ್ಲಿಷ್‌ ಸೇರಿದಂತೆ 5,000ಕ್ಕೂ ಮಿಕ್ಕಿ ಪುಸ್ತಕಗಳಿವೆ. ಅದರಲ್ಲಿ ಸುಮಾರು 2,000ದಷ್ಟು ತುಳು ಭಾಷೆ, ಸಂಸ್ಕೃತಿಗೆ ಸಂಬಂಧಪಟ್ಟ ಪುಸ್ತಕಗಳಿವೆ. ಈಗಾಗಲೇ ಅನೇಕ ದಾನಿಗಳು ತುಳು ಸಾಹಿತ್ಯ ಅಕಾಡೆಮಿಗೆ ಪುಸ್ತಕಗಳನ್ನು ನೀಡಿದ್ದು, ದಿನೇ ದಿನೇ ಪುಸ್ತಕ ದಾನ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ಸಮಯದ ಹಿಂದೆ ಎಪ್ಪತ್ತು ಯಕ್ಷಗಾನ ಪುಸ್ತಕಗಳು ದಾನವಾಗಿ ಬಂದಿದ್ದವು. 

ಗ್ರಂಥಾಲಯದಲ್ಲಿ ಹತ್ತು ಸಾವಿರ ಪುಸ್ತಕಕ್ಕೆ ಅವಕಾಶ 
ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ. ಸುದಿನಕ್ಕೆ ಪ್ರತಿಕ್ರಿಯಿಸಿ ‘ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವಿಷಯಾನುಕ್ರಮವಾಗಿ ವಿಂಗಡಿಸಿ ಜೋಡಿಸಲಾಗಿದೆ. ಅಕಾಡೆಮಿ ಗ್ರಂಥಾಲಯದಲ್ಲಿ ಸುಮಾರು 10,000 ಪುಸ್ತಕಗಳ ಸಂಗ್ರಹಕ್ಕೆ ಅವಕಾಶವಿದೆ. ಸಂಗ್ರಹವನ್ನು ಹೆಚ್ಚಿಸಿ ತುಳುನಾಡಿನ ಚರಿತ್ರೆ ಹಾಗೂ ಸಂಸ್ಕೃತಿಗಳ ಸಮಗ್ರ ಸಂಗ್ರಹವಿರುವ ಕೇಂದ್ರವನ್ನಾಗಿ ಮಾಡಲು ಅಕಾಡೆಮಿ ಶ್ರಮಿಸುತ್ತಿದೆ ಎಂದು ತಿಳಿಸಿದರು. 

Advertisement

ಪುಸ್ತಕ ಸಂಗ್ರಹ
ತುಳು ಭಾಷೆಯಲ್ಲಿ ಈಗಾಗಲೇ ಪದವಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ಸಿಲೆಬಸ್‌ ಗಳ ಆಕರ ಗ್ರಂಥಗಳಿಗೆ ಅನುಕೂಲವಾಗಬೇಕೆಂದು ಮತ್ತಷ್ಟು ಹೆಚ್ಚಿನ ತುಳು ಪುಸ್ತಕಗಳನ್ನು ಸಂಗ್ರಹಿಸಲು ಅಕಾಡೆಮಿ ಮುಂದಾಗಿದೆ. ಕೆಲವೊಂದು ಪುಸ್ತಕಗಳು ದಾನವಾಗಿ ಬರುತ್ತಿದ್ದು, ಮತ್ತೂ ಕೆಲವು ಪುಸ್ತಕ ಖರೀದಿ ಮಾಡಲಾಗುತ್ತಿದೆ.
– ಎ.ಸಿ. ಭಂಡಾರಿ
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next