Advertisement

ದೊಡ್ಡಾಟ ಕಲಾವಿದನಿಗೆ ಅಕಾಡೆಮಿ ಪ್ರಶಸ್ತಿ

10:58 AM Feb 25, 2022 | Team Udayavani |

ಔರಾದ: ವೃತ್ತಿಯಲ್ಲಿ ಯಶಸ್ವಿ ಕೃಷಿಕರಾಗಿ ಬದುಕಿನುದ್ದಕ್ಕೂ ಸಂಗೀತ ಮತ್ತು ರಂಗ ಕಲೆ ಮೈಗೂಡಿಸಿಕೊಂಡಿರುವ ಜಿಲ್ಲೆಯ ಹಿರಿಯ ಜೀವಿ ರಾಮಶೆಟ್ಟಿ ಬಂಬುಳಗೆ ಅವರಿಗೆ ಕರ್ನಾಟಕ ಬಯಲಾಟ ಅಕಾಡೆಯಿಯಿಂದ ಕೊಡಮಾಡುವ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದೆ.

Advertisement

ಔರಾದ ತಾಲೂಕಿನ ಜೀರ್ಗಾ(ಬಿ) ಗ್ರಾಮದ ರಾಮಶೆಟ್ಟಿ ಮಾಣಿಕಪ್ಪ ಬಂಬುಳಗೆ ದೊಡ್ಡಾಟದ ರಂಗ ಕಲೆ ಮೂಲಕ ಗ್ರಾಮದ ಖ್ಯಾತಿ ಈಗ ರಾಜ್ಯಕ್ಕೆ ಬಿತ್ತರಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಕಲೆ ಅಭಿರುಚಿ ಬೆಳೆಸಿಕೊಂಡು ಬಂದಿರುವ ರಾಮಶೆಟ್ಟಿ ಹಲವು ದಶಕಗಳಿಂದ ದೊಡ್ಡಾಟದಲ್ಲಿ ಅಭಿನಯಿಸುತ್ತ ಬಂದಿದ್ದಾರೆ. ಅಷ್ಟೇ ಅಲ್ಲ ಹಾಡುಗಾರಿಕೆ, ತಬಲಾ ವಾದನದಲ್ಲೂ ಸೈ ಎನಿಸಿಕೊಂಡು ಕಲೆಯನ್ನೇ ಉಸಿರಾಗಿಸಿಕೊಂಡು ಜೀವಿಸುತ್ತಿದ್ದಾರೆ. 63ರ ಹಿರಿಯ ವಯಸ್ಸಿನಲ್ಲಿಯೂ ಕಲೆ ಆಸಕ್ತಿ ಮಾತ್ರ ಇನ್ನೂ ಕುಗ್ಗಿಲ್ಲ ಎಂಬುದು ವಿಶೇಷ.

ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆದು ಪ್ರಗತಿಪರ ರೈತರೆನಿಸಿಕೊಂಡಿರುವ ರಾಮಶೆಟ್ಟಿ ಕಲೆಯ ಅಭಿರುಚಿ ಬೆಳೆಸಿಕೊಂಡಿದ್ದಾರೆ. ಗ್ರಾಮದಲ್ಲಿ ನಡೆಯುತ್ತಿದ್ದ ದೊಡ್ಡಾಟ ಪ್ರಯೋಗ ವೀಕ್ಷಿಸುತ್ತಿದ್ದ ಅವರಲ್ಲೂ ನಟನೆ ಮಾಡಬೇಕೆಂಬ ಆಸಕ್ತಿ ಬೆಳೆಯಿತು. ಜೀರ್ಗಾ (ಬಿ) ಗ್ರಾಮದ ಹಿರಿಯ ರಂಗ ಕಲಾವಿದ ಗುರುನಾಥ ಕೋಟೆ ನೇತೃತ್ವದ ದೊಡ್ಡಾಡ ಪಡೆಯಲ್ಲಿ ಅಭಿನಯಿಸುತ್ತ ಬಂದರು. ಗ್ರಾಮ ಮಾತ್ರವಲ್ಲ ಜಿಲ್ಲಾ ಕೇಂದ್ರ ಬೀದರ ಮತ್ತು ಧರಿ ಹನುಮಾನ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ದೊಡ್ಡಾಟದಲ್ಲಿ ವಿಶೇಷವಾಗಿ “ಗಿರಿಜಾ ಕಲ್ಯಾಣ’ ನಾಟಕದಲ್ಲಿ ಸಾರಥಿ ಮತ್ತು ವಜ್ಜರ ಧನಿಷ್ಠ ಪ್ರಧಾನಿಯ ಪಾತ್ರ ನಿರ್ವಹಿಸಿದ್ದಾರೆ.

ಈ ದೊಡ್ಡಾಟ ಆಡುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ಸುಮಾರು 25 ಕಲಾವಿದರ ತಂಡ, ಏಳೆಂಟು ತಿಂಗಳ ಸಿದ್ಧತೆ ಬೇಕು. ಮುಖ್ಯವಾಗಿ ದೊಡ್ಡಾಟದಲ್ಲಿ ಡೈಲಾಗ್‌ ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಅಷ್ಟು ದಿನ ಕಾಲ ಧ್ವನಿ ಕೆಡದಂತೆ ಎಣ್ಣೆ ಮತ್ತಿರ ಆಹಾರ ಸೇವನೆ ಬಿಡಬೇಕಾಗುತ್ತದೆ. ಯಕ್ಷಗಾನದ ಪ್ರತಿರೂಪದಂತಿರುವ ದೊಡ್ಡಾಟ ಇಂದು ಸಾಗರದಾಚೆ ತನ್ನ ಪ್ರಯೋಗ ಮಾಡಬೇಕಿತ್ತು. ಆದರೆ, ಪ್ರೋತ್ಸಾಹದ ಕೊರತೆಯಿಂದ ಕಲೆ ಸಂಪೂರ್ಣ ನಶಿಸಿ ಹೋಗಿದೆ. ದೊಡ್ಡಾಟ ಆಡಿಸುವವರು, ಆಡುವವರು ಇಲ್ಲದಂತಾಗಿದೆ. ಯಕ್ಷಗಾನದಂತೆ ರಂಗ ಕಲೆ ಸಾಂಸ್ಕೃತಿಕ ಪ್ರತೀಕವಾಗಿರುವ ದೊಡ್ಡಾಟ ಸಹ ಜೀವಂತವಾಗಿ ಇಡಬೇಕಿದೆ. ನಾಟಕ ಆಡಿಸುವವರಿಗೆ ಮತ್ತು ನಟರಿಗೆ ಅಗತ್ಯ ತರಬೇತಿ ಜತೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ, ಅಕಾಡೆಮಿಗಳು ಮುಂದಾಗಬೇಕಿದೆ.

ಯಕ್ಷಗಾನ ಬಯಲಾಟ ಅಕಾಡೆಮಿ, ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾ ಜಾನಪದ ಪರಿಷತ್‌ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸಮ್ಮಾನಗಳಿಗೆ ಪಾತ್ರರಾಗಿರುವ ರಾಮಶೆಟ್ಟಿ ಬಂಬುಳಗೆ ಅವರಿಗೆ ಪ್ರಸಕ್ತ ವರ್ಷದ ಬಯಲಾಟ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

Advertisement

ಕೃಷಿ ಕಾಯಕ ಮಾಡಿಕೊಂಡಿರುವ ನಾನು ಕಿರಿಯ ವಯಸ್ಸಿನಿಂದಲೂ ರಂಗ ಕಲೆ ಮತ್ತು ಸಂಗೀತದ ಅಭಿರುಚಿ ಬೆಳೆಸಿಕೊಂಡಿದ್ದೇನೆ. ಗ್ರಾಮದಲ್ಲಿ ದೊಡ್ಡಾಟ ಆಡಿಸುತ್ತಿದ್ದ ಹಿರಿಯ ಕಲಾವಿದ ಗುರುನಾಥ ಕೋಟೆ ಅವರಿಂದ ಪ್ರಭಾವಿತನಾಗಿ “ಗಿರಿಜಾ ಕಲ್ಯಾಣ’ ದೊಡ್ಡಾಟದಲ್ಲಿ ಪ್ರದರ್ಶಿಸುತ್ತ ಬಂದಿದ್ದೇನೆ. ಜಾತ್ರೆ, ಮಹೋತ್ಸವ ಮತ್ತು ಸಪ್ತಾಹಗಳಲ್ಲಿ ಜಾನಪದ, ಭಜನೆ ಗಾಯನ ಜತೆಗೆ ತಬಲಾ ವಾದನ ಮಾಡುತ್ತೇನೆ. ಕೋಲಾಟದ ಪದ ಹಾಡುಗಾರಿಕೆಯೂ ಕರಗತ ಮಾಡಿಕೊಂಡಿದ್ದೇನೆ. ನನ್ನ ಕಲಾ ಸೇವೆ ಗುರುತಿಸಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸದ ತಂದಿದೆ. -ರಾಮಶೆಟ್ಟಿ ಬಂಬುಳಗೆ, ಪ್ರಶಸ್ತಿ ಪುರಸ್ಕೃತ ಜೀರ್ಗಾ(ಬಿ)

ಕುಗ್ರಾಮದ ದೊಡ್ಡಾಟ ಕಲಾವಿದ ರಾಮಶೆಟ್ಟಿ ಬಂಬುಳಗೆ ಅವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಹರ್ಷದ ವಿಷಯ. ಅಕಾಡೆಮಿ ಪ್ರಶಸ್ತಿಗಳಿಗೆ ಈ ಹಿಂದೆ ಕಡೆಗಣಿಸುತ್ತಿದ್ದ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರನ್ನು ಕಳೆದ ಕೆಲ ವರ್ಷಗಳಿಂದ ಪರಿಗಣಿಸುತ್ತಿರುವುದು ಖುಷಿ ಆಗಿದೆ. ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಮುಂದೆ ಅಗತ್ಯ ಸೌಲಭ್ಯ ಕಲ್ಪಿಸಿ ಅವರನ್ನು ಗೌರವದಿಂದ ಕಾಣಬೇಕಿದೆ. -ವಿಜಯಕುಮಾರ ಸೋನಾರೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ

-ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next