Advertisement

ಶೈಕ್ಷಣಿಕ ಸಂದಿಗ್ಧತೆ; ಸರಕಾರಗಳ ಕಾಳಜಿ ಶ್ಲಾಘನೀಯ

01:37 AM Aug 13, 2020 | mahesh |

ಸರಿಸುಮಾರು ಐದು ತಿಂಗಳ ಹಿಂದೆ, ಕೋವಿಡ್‌ ರೋಗದ ಅಪಾಯವನ್ನು ತಡೆಯಲು ಪೂರ್ಣ ಲಾಕ್‌ಡೌನ್‌ ಜಾರಿಯಾಗಿತ್ತು. ಆಗಿನಿಂದಲೂ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮುಚ್ಚಿಯೇ ಇವೆ. ಆದಾಗ್ಯೂ, ಈಗ ಲಾಕ್‌ಡೌನ್‌ ನಿರ್ಬಂಧಗಳು ಸಡಿಲವಾಗುತ್ತಾ, ನಿಧಾನಕ್ಕೆ ವಿವಿಧ ಕ್ಷೇತ್ರಗಳ ಬಾಗಿಲುಗಳು ಮತ್ತೆ ತೆರೆದುಕೊಳ್ಳಲಾರಂಭಿಸಿವೆಯಾದರೂ, ಶಾಲೆ-ಕಾಲೇಜುಗಳು ಸೇರಿದಂತೆ, ಎಲ್ಲೆಲ್ಲಿ ಹೆಚ್ಚು ಜನರು ಸೇರಬಹುದೋ ಅಂಥ ಕ್ಷೇತ್ರಗಳ ಮೇಲಿನ ನಿರ್ಬಂಧ ಇನ್ನೂ ಮುಂದುವರಿದಿದೆ.

Advertisement

ಅದರಲ್ಲೂ ಶಾಲೆ-ಕಾಲೇಜುಗಳ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿರುವುದು ಶ್ಲಾಘನೀಯ ಸಂಗತಿಯೇ ಸರಿ. ಏಕೆಂದರೆ, ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆಟೋಟಗಳು ಹೇಗಿರುತ್ತವೆ, ಅವರು ಹೇಗೆ ಬೆರೆಯುತ್ತಾರೆ ಎನ್ನುವುದನ್ನೆಲ್ಲ ಪರಿಗಣಿಸಿದಾಗ, ಅವರು ಈ ಸಾಂಕ್ರಾಮಿಕದಿಂದ ಸುರಕ್ಷಿತವಾಗಿರಬಲ್ಲರೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳ ವಿಚಾರದಲ್ಲಿ ಸರಕಾರಗಳ ಈ ಕಾಳಜಿ ಮುಂದುವರಿಯಲೇಬೇಕು. ಏಕೆಂದರೆ, ಶಾಲಾ ಮಕ್ಕಳು ಸುರಕ್ಷತ ಕ್ರಮಗಳನ್ನು ಅವಗಣಿಸುವ ಸಾಧ್ಯತೆ ಅಧಿಕವೇ ಇರುತ್ತದೆ.

ಇಷ್ಟು ದೀರ್ಘಾವಧಿಯವರೆಗೆ ದೇಶಾದ್ಯಂತ ಹೀಗೆ ಶಾಲೆಗಳು ಬಾಗಿಲು ಹಾಕಿದ ಉದಾಹರಣೆಗಳೇ ಇಲ್ಲ ಎನ್ನುವುದು ಸತ್ಯ. ಇನ್ನು ಕೆಲವು ರಾಜ್ಯಗಳಲ್ಲಿ ಸೀಮಿತ ಸ್ತರದಲ್ಲಿ ಆನ್‌ಲೈನ್‌ ಶಿಕ್ಷಣ ನಡೆಯುತ್ತಿದೆ, ಈ ರೀತಿಯ ನವ ಶಿಕ್ಷಣ ಮಾರ್ಗದ ವ್ಯಾಪಕ ಅನುಷ್ಠಾನಕ್ಕೆ ಎಲ್ಲೆಡೆಯೂ ಚಿಂತನೆ ಸಾಗಿದೆಯಾದರೂ, ಪೋಷಕರು ಮನದಲ್ಲಂತೂ ಇವೆಲ್ಲ ಯಾವಾಗ ನಿಲ್ಲಲಿದೆಯೋ ಎನ್ನುವ ಆತಂಕ ಕಾಡುತ್ತಿದೆ. ಸಹಜವಾಗಿಯೇ ಮಕ್ಕಳ ಭವಿಷ್ಯದ ಬಗ್ಗೆ ಅವರಲ್ಲಿ ಕಳವಳ ಮನೆ ಮಾಡಿರಲಿಕ್ಕೂ ಸಾಕು.

ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಸೋಮವಾರ ಒಂದು ಸಂಸದೀಯ ಸ್ಥಾಯಿ ಸಮಿತಿಗೆ ಹೇಳಿರುವುದೇನೆಂದರೆ, ಪ್ರಸಕ್ತ ಶೈಕ್ಷಣಿಕ ವರ್ಷವು ಶೂನ್ಯ ವರ್ಷ ಅಥವಾ ಝೀರೋ ಇಯರ್‌ ಆಗಿರುವುದಿಲ್ಲ ಎನ್ನುವುದು. ಅಂದರೆ, ಕೇಂದ್ರವು ಅನ್ಯ ವಿಕಲ್ಪಗಳತ್ತ ಗಮನ ಹರಿಸುತ್ತಿದೆ ಎಂದು ಇದರರ್ಥ. ಆದರೆ ಈ ಮಾತು ನಿಜಕ್ಕೂ ಎಷ್ಟು ಸತ್ಯವಾಗುತ್ತದೆ ಎನ್ನುವುದು ಕೋವಿಡ್‌ ಪ್ರಕರಣಗಳ ತಗ್ಗುವಿಕೆಯನ್ನೇ ಆಧರಿಸಿರಲಿದೆ. ಕೇಂದ್ರದ ವಿಚಾರ ಅತ್ತ ಇರಲಿ. ಇತ್ತ, ರಾಜ್ಯದ ವಿಷಯಕ್ಕೆ ಬಂದರೂ ನಮ್ಮಲ್ಲೇನೂ ಇದು ಶೂನ್ಯ ಶೈಕ್ಷಣಿಕ ವರ್ಷವಂತೂ ಆಗುವುದಿಲ್ಲ. ಶಿಕ್ಷಣ ಇಲಾಖೆಯು ಈಗಾಗಲೇ ಯಶಸ್ವಿಯಾಗಿ ಅಗತ್ಯ ಪರೀಕ್ಷೆಗಳನ್ನು ನಡೆಸಿಯಾಗಿದೆ.

ಹಾಗಿದ್ದರೆ, ಈ ವರ್ಷದ ಅಂತ್ಯದ ವೇಳೆಗಾದರೂ ಶೈಕ್ಷಣಿಕ ಸಂಸ್ಥೆಗಳು ಆರಂಭವಾಗುವವೇ ಎನ್ನುವ ಪ್ರಶ್ನೆ ತಟ್ಟನೆ ಎದುರಾಗುತ್ತದೆ. ಈ ಪ್ರಶ್ನೆಗೆ ಎಲ್ಲಾ ಸರಕಾರಗಳೂ ಹೇಳುತ್ತಿರುವುದು- ಅದನ್ನು ಹೇಳಲು ಬರುವುದಿಲ್ಲ ಎನ್ನುವುದೇ ಆಗಿದೆ! ಇದು ನಿಜ ಸಹ. ದೇಶಾದ್ಯಂತ ಕೋವಿಡ್‌ ಪ್ರಕರಣಗಳು ಅಧಿಕವಾಗುತ್ತಲೇ ಸಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 23 ಲಕ್ಷ ದಾಟಿದೆ. ನಿತ್ಯ ಸೋಂಕಿತರ ಸಂಖ್ಯೆ 60 ಸಾವಿರದ ಗಡಿ ದಾಟುತ್ತಿದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆಯಾದರೂ, ಯಾವ ರಾಜ್ಯವೂ ಈ ವೈರಸ್‌ನಿಂದ ಮುಕ್ತವಾಗಿಲ್ಲ. ಪತ್ತೆಯಾಗದ ಒಬ್ಬ ಸೋಂಕಿತನೂ ಎಷ್ಟೊಂದು ಜನರಿಗೆ ಸೋಂಕು ಹರಡಬಲ್ಲ ಎನ್ನುವುದು ನಮಗೀಗ ತಿಳಿದಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ, ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯದಿರುವ ಸರಕಾರಗಳ ನಿರ್ಧಾರಗಳು ಸರಿಯಾಗಿಯೇ ಇವೆ ಎಂದು ಅರ್ಥವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next