Advertisement

ರಸ್ತೆಗೆ ಬಾಗಿದ ಮರದ ಕೊಂಬೆಗಳು

04:06 PM Mar 05, 2023 | Team Udayavani |

ಆಲೂರು: ತಾಲೂಕಿನ ಬೈರಾಪುರ ಗ್ರಾಮದಿಂದ ಮಗ್ಗೆ ಗ್ರಾಮ ಹಾಗೂ ಆಲೂರಿನಿಂದ ಕಾಮತಿ ಕೂಡಿಗೆ ಹೋಗುವ ರಸ್ತೆ ಇಕ್ಕೆಲಗಳಲ್ಲಿರುವ ಅಕೆಶ್ಯಾ ಮರಗಳ ಕೊಂಬೆಗಳು ರಸ್ತೆಗೆ ಬಾಗಿಕೊಂಡಿದ್ದು, ವಾಹನ ಹಾಗೂ ಪಾದಚಾರಿ ಸಂಚಾರಕ್ಕೆ ತೊಂದರೆ ಆಗುತ್ತಿದೆ.

Advertisement

ರಸ್ತೆಯಲ್ಲಿ ಓಡಾಡುವ ಸಾರ್ವಜನಿಕ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ನೆರಳಿನ ಆಸರೆಯಾಗಲಿ ಎನ್ನುವ ಉದ್ದೇಶದಿಂದ 30 ವರ್ಷದ ಹಿಂದೆ ಅರಣ್ಯ ಇಲಾಖೆ ರಸ್ತೆಯ ಎರಡು ಬದಿಗಳಲ್ಲಿ ಹಾಕಿದ್ದ ಅಕೆಶ್ಯಾ ಮರಗಳು ದೊಡ್ಡದಾಗಿ ಹೆಮ್ಮರವಾಗಿ ಬೆಳೆದಿವೆ. ರಸ್ತೆಯ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದಿರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇದರ ಜೊತೆಗೆ ಮಳೆ-ಗಾಳಿಗೆ  ಮರಗಳು ವಾಹನ ಹಾಗೂ ವಾಹನ ಸವಾರರ ಮೇಲೆ ಬೀಳುವುದರಿಂದ ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಜನಸಾಮಾನ್ಯರಿಗೆ ಕಿರಿಕಿರಿ: ಇದರಿಂದ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಹಾಗೂ ಜನಸಾಮಾನ್ಯರು ಕಿರಿಕಿರಿ ಅನಿಭವಿಸುವಂತಾಗಿದೆ. ಅಕೆಶ್ಯಾ ಮರದ ಬೇರುಗಳು ಆಳವಾಗಿರದೇ ಮೇಲ್ಪದರದಲ್ಲಿ ಅಗಲವಾಗಿ ಬೆಳೆದಿರುವುದರಿಂದ ಸ್ವಲ್ಪ ಗಾಳಿ-ಮಳೆಯಾದರೂ ಮರಗಳು ನೆಲಕ್ಕೆ ಉರುಳುತ್ತವೆ. ಈ ರಸ್ತೆಯಲ್ಲಿ ಓಡಾಡುವ ಜನರು ಹಾಗೂ ವಾಹನಗಳು ಭಯದಿಂದ ಓಡಾಡದಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.

ಜೀವ ಕೈಯಲ್ಲಿಡಿದು ಓಡಾಡುವಂತಹ ಸ್ಥಿತಿ: ರಸ್ತೆಯಲ್ಲಿ ಓಡಾಡುವ ಸಾವಿರಾರು ವಾಹನ ಹಾಗೂ ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಮಳೆ ಪ್ರಾರಂಭವಾಗುವ ಮೊದಲು ಸಂಚಾರಕ್ಕೆ ಅಡ್ಡಿಯಾಗುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿ ಕೊಡಿ : ರಸ್ತೆಯಲ್ಲಿ ಸ್ವಲ್ಪ ಮಳೆ-ಗಾಳಿಯಾದರೂ ಮರಗಳು ನೆಲಕ್ಕೆ ಉರುಳುತ್ತವೆ. ಇದರಿಂದ ಸಾರ್ವಜನಿಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ರಸ್ತೆಗೆ ಬಾಗಿರುವ ಹಾಗೂ ಶಿಥಿಲವಾದ ಮರಗಳನ್ನು ತೆರವುಗೊಳಿಸಿ ವಾಹನ ಸುಗಮ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಓಡಾಡಲು ಅನುವು ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್‌ ಒತ್ತಾಯಿಸಿದರು.

Advertisement

ಶಿಥಿಲಗೊಂಡ ಹಳೆ ಮರ ತೆರವುಗೊಳಿಸಿ : ರಸ್ತೆಯ ಇಕ್ಕೆಲಗಳಲ್ಲಿರುವ ಕೆಲವು ಮರಗಳು ಶಿಥಿಲಗೊಂಡು ಒಣಗಿ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ಹಾಗೂ ವಾಹನಗಳ ಮೇಲೆ ಬೀಳುವ ಸ್ಥಿತಿಯಲ್ಲಿವೆ. ಕೆಲವು ಮರಗಳು ರಸ್ತೆಗೆ ವಾಲಿಕೊಂಡಿದ್ದರೂ, ಸಂಬಂಧಪಟ್ಟವರು ಅವುಗಳನ್ನು ತೆಗೆಯಲು ಮುಂದಾಗುವುದಿಲ್ಲ. ಅನಾಹುತ ಆಗುವುದಕ್ಕಿಂತ ಮುಂಚೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಸೇವಕ ಎಂ.ಬಾಲಕೃಷ್ಣ ಆಗ್ರಹಿಸಿದರು.

ಬೈರಾಪುರ ಮಗ್ಗೆ ರಸ್ತೆಯಲ್ಲಿರುವ ಕೆಲವು ಅಕೆಶ್ಯಾ ಮರಗಳು ಅಪಾಯದಲ್ಲಿದ್ದು, ಬಾಗಿರುವ ಹಾಗೂ ಶಿಥಿಲವಾದ ಮರಗಳನ್ನು ತೆರವುಗೊಳಿಸಲು 200 ಮರ ಗುರುತಿಸಿ ನಂಬರ್‌ ಮಾಡಿ ಅನುಮೋದನೆಗಾಗಿ ಎಸಿಎಫ್ ಹಾಗೂ ಡಿಎಫ್ಒ ಕಚೇರಿಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ಅದಷ್ಟು ಬೇಗ ಮರಗಳನ್ನು ತೆರವುಗೊಳಿಸಲಾಗುವುದು. – ಎಚ್‌.ಕೆ. ಮರಿಸ್ವಾಮಿ, ಆರ್‌ಎಫ್ಒ, ಆಲೂರು ತಾಲೂಕು

-ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ,

Advertisement

Udayavani is now on Telegram. Click here to join our channel and stay updated with the latest news.

Next