Advertisement

ಕಾಗಿಣಾ ನದಿ ನೀರು ಬಳಸದಂತೆ ಎಸಿಸಿಗೆ ಎಸಿ ಪೂಜಾರ ಸೂಚನೆ

09:51 AM Mar 14, 2019 | |

ವಾಡಿ: ಎಲ್ಲೆಡೆ ಜಲಕ್ಷಾಮ ಉಂಟಾಗಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಜನರ ಬಳಕೆ ದೃಷ್ಟಿಯಿಂದ ಬತ್ತಿದ ಕಾಗಿಣಾ ನದಿಗೆ ಬೆಣ್ಣೆತೋರಾ ಜಲಾಶಯದಿಂದ ನೀರು ಹರಿಬಿಡಲಾಗಿದೆ. ವಿವಿಧ ಗ್ರಾಮಗಳ ಜನರಿಗೆ ಸಮರ್ಪಕವಾಗಿ ನೀರು ತಲುಪುವ ವರೆಗೆ ದಿನದಲ್ಲಿ ಕೇವಲ ಎರಡು ತಾಸು ಮಾತ್ರ ನೀರು ಪಡೆಯುವಂತೆ ಸೇಡಂ ಸಹಾಯಕ ಆಯುಕ್ತ ವೀರಮಲ್ಲಪ್ಪ ಪೂಜಾರ ಎಸಿಸಿ ಕಂಪನಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಇಂಗಳಗಿ ಕಾಗಿಣಾ ಹಾಗೂ ಕುಂದನೂರಿನ ಭೀಮಾ ನದಿಗಳಿಗೆ ಭೇಟಿ ನೀಡಿ ವಾಸ್ತವ ನೀರಿನ ಸ್ಥಿತಿಗತಿ ಅರಿತ ಬಳಿಕ ನೇರವಾಗಿ ಎಸಿಸಿ ಕಾರ್ಖಾನೆಯ ಜಾಕ್ವೆಲ್‌ ಘಟಕಕ್ಕೆ ಭೇಟಿ ನೀಡಿದ ಆಯುಕ್ತ ವೀರಮಲ್ಲಪ್ಪ ಪೂಜಾರ, ಕಾಗಿಣಾ ನದಿಯಲ್ಲಿ ಅಳವಡಿಸಲಾಗಿದ್ದ ಲಕ್ಷಾಂತರ ಲೀಟರ್‌ ನೀರು ಸಂಗ್ರಹಿಸುವ ಹಲವು ನೀರಿನ ಗುಮ್ಮಿಗಳನ್ನು ವೀಕ್ಷಿಸಿದರು.

ಕಾಗಿಣಾ ನದಿ ನೀರು ಹರಿದು ಭೀಮಾ ನದಿಗೆ ಸೇರಬೇಕು. ಅಲ್ಲಿಂದ ವಾಡಿ ಪುರಸಭೆಗೆ ಸೇರಿದ ಕುಂದನೂರ್‌ ಜಾಕ್ವೆಲ್‌ಗೆ ತಲುಪಬೇಕು. ಅಲ್ಲಿವರೆಗೆ ಎಸಿಸಿ ಯಂತ್ರಗಳು ನೀರು ಹೀರಿಕೊಳ್ಳುತ್ತವೆ. ನಮಗೆ ನೀರು ಸಿಗುವುದಿಲ್ಲ ಎಂದು ವಾಡಿ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಆಯುಕ್ತರ ಗಮನ ಸೆಳೆದರು. ತಕ್ಷಣ ಎಸಿಸಿ ಜಾಕ್ವೆಲ್‌ ಘಟಕದ ಬೀಗ ಕಸಿದುಕೊಂಡ ಆಯುಕ್ತರು, ಇನ್ಮುಂದೆ ಬೇಕಾಬಿಟ್ಟಿ ಕಾಗಿಣಾ ನದಿಯ ನೀರು ಪಡೆಯುವಂತಿಲ್ಲ. ದಿನದಲ್ಲಿ ಕೇವಲ ಎರಡು ತಾಸು ಮಾತ್ರ ಪುರಸಭೆ ಸಿಬ್ಬಂದಿ ನಿಗರಾಣಿಯಲ್ಲಿ ಯಂತ್ರಗಳು ಕಾರ್ಯನಿರ್ವಹಿಸಬೇಕು. ಆದೇಶ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ ಎಂದು ಸೂಚಿಸಿದರು.

ಬೆಣ್ಣೆತೋರಾ ಜಲಾಶಯದಿಂದ ಬಿಡಲಾಗಿರುವ ನೀರನ್ನು ಕುಂದನೂರು ಜಾಕ್ವೆಲ್‌ ಬಳಿ ಸಂಗ್ರಹ ಮಾಡಿಕೊಳ್ಳಬೇಕು. ಬೇಸಿಗೆ ಕಳೆಯುವ ವರೆಗೂ ನೀರು ಒಂದೆಡೆ ನೆಲೆ ನಿಲ್ಲಲು ನದಿಗೆ ಅಡ್ಡಲಾಗಿ ರಿಂಗ್‌ಬೌಂಡ್‌ ನಿರ್ಮಿಸಿಕೊಳ್ಳಬೇಕು. ನೀರನ್ನು ಮಿತವಾಗಿ ಸರಬರಾಜು ಮಾಡಬೇಕು. ಒಟ್ಟಾರೆ ಜನರಿಗೆ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಪುರಸಭೆ ಮುಖ್ಯಾಧಿ ಕಾರಿ ವಿಠ್ಠಲ ಹಾದಿಮನಿ ಅವರಿಗೆ ಹೇಳಿದರು. ಪುರಸಭೆ ವ್ಯವಸ್ಥಾಪಕ ಮಲ್ಲೇಶ ಅಕ್ಕರಕಿ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಗೋಪಾಲ ರಾಠೊಡ, ಜಲಮಂಡಳಿ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next