Advertisement

ದಾವಣಗೆರೆ ಎಸಿ, ತಹಶೀಲ್ದಾರ್‌ ಹತ್ಯೆ ಯತ್ನ

03:45 AM Apr 09, 2017 | Team Udayavani |

ದಾವಣಗೆರೆ: ಅಕ್ಕಿ ಗಿರಣಿಯ ಗೋದಾಮಿನಲ್ಲಿದ್ದ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ವಶಕ್ಕೆ ಮುಂದಾದ ದಾವಣಗೆರೆ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಮತ್ತು ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಮಿನಿ ಟ್ರಕ್‌ ನುಗ್ಗಿಸಿ ಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ದೊಡ್ಡಬಾತಿ ಬಳಿ ನಡೆದಿದೆ.

Advertisement

ಮಧ್ಯಾಹ್ನ 1.30ರ ಸಮಯದಲ್ಲಿ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್‌ ಸಂತೋಷಕುಮಾರ್‌ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಪಡಿತರ ಧಾನ್ಯ ದಾಸ್ತಾನು ಮಾಡಿದ್ದ ಅಕ್ಕಿ ಗಿರಣಿ ಮೇಲೆ ದಾಳಿ ನಡೆಸಿದರು. ಆಗ ಅಕ್ಕಿ ಗಿರಣಿ ಮಾಲೀಕ ಉಮಾಪತಿ ಗಿರಣಿ ಆವರಣದಲ್ಲಿದ್ದ ಪಡಿತರ ದಾಸ್ತಾನು ತುಂಬಿದ್ದ ಮಿನಿ ಟ್ರಕ್‌ನ ಚಾಲಕನಿಗೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಮೇಲೆಯೇ ನುಗ್ಗಿಸಲು ಸೂಚಿಸಿದರು. ಅದರಂತೆ ಚಾಲಕ ಹತ್ಯೆಗೆ ಯತ್ನಿಸಿದ್ದು, ವಿಫ‌ಲವಾದ ತಕ್ಷಣ ವಾಹನದೊಂದಿಗೆ ಪರಾರಿಯಾಗಿದ್ದಾನೆ.

ಲಂಚ ಆರೋಪ: ಮಾಧ್ಯಮ ಪ್ರತಿನಿಧಿಗಳು ಬಂದಾಗ ವರಸೆ ಬದಲಿಸಿದ ಉಮಾಪತಿ, ಅಧಿಕಾರಿಗಳು ತಮ್ಮ ಬಳಿ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟರು ಎಂದು ಆರೋಪಿಸಿದರು. ತಮ್ಮ ವಾಹನದ ಮುಂದೆ ನಿಂತಿದ್ದ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಜೇಬಿಗೆ 50 ಸಾವಿರ ರೂ. ತುರುಕಲು ಸಹ ಉಮಾಪತಿ ಯತ್ನಿಸಿದರು. ಆದರೆ, ಕುಮಾರಸ್ವಾಮಿ ಹಣವನ್ನು ಬಿಸಾಡಿದರು. ಆಗ ಎಲ್ಲಾ ಅಧಿಕಾರಿಗಳು ಮತ್ತು ಮಾಧ್ಯಮದವರೂ ತಮ್ಮ ಬಳಿ ಹಣ ಪಡೆದಿದ್ದಾರೆಂದು ಗೊಣಗುತ್ತಾ ಅಲ್ಲಿಂದ ಕಾಲ್ಕಿತ್ತರು. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಉಮಾಪತಿಯನ್ನು ಪೊಲೀಸರು
ಬಂಧಿಸಿದ್ದಾರೆ.

ಅನ್ನಭಾಗ್ಯದ ದೂರಿದ್ರೆ ನನಗೇ ಕೊಡಿ
ಅನ್ನಭಾಗ್ಯ ಯೋಜನೆಯಲ್ಲಿ ಲೋಪದೋಷ ಅಥವಾ ದೂರಿದ್ದಲ್ಲಿ ತಮಗೇ ಸಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದಾರೆ. ಶನಿವಾರ ಯೋಜನೆಯ ಹೆಚ್ಚುವರಿ ಅಕ್ಕಿ ವಿತರಿಸಿ ಮಾತನಾಡಿ, ಅನ್ನಭಾಗ್ಯ ಯೋಜನೆ ದುರುಪ ಯೋಗವಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕೆಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next