ಹುಬ್ಬಳ್ಳಿ: ರೈಲ್ವೆ ನಿಲ್ದಾಣ ಕೇವಲ ರೈಲುಗಳು ನಿಲ್ಲುವ ತಾಣವಲ್ಲ. ಅದು ನಿರಾಶ್ರಿತರ ತಾಣವೂ ಹೌದು. ಪ್ರತಿಯೊಂದು ರೈಲು ನಿಲ್ದಾಣದಲ್ಲಿ ನಿರಾಶ್ರಿತ ಮಕ್ಕಳು, ಮಕ್ಕಳಿಂದ ಕಡೆಗಣಿಸಲ್ಪಟ್ಟ ಹಿರಿಯರು ಇದ್ದೇ ಇರುತ್ತಾರೆ. ಅವರು ಇಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ. ಇಂಥವರಿಗಾಗಿಯೇ ನೈರುತ್ಯ ರೈಲ್ವೆ ಮಾಡಿದ ವಿನೂತನ ಪ್ರಯೋಗ ಕೈಗೊಂಡಿದೆ.
ಹೌದು. ಆಶ್ರಯವಿಲ್ಲದ, ಅನಾಥ ಮಕ್ಕಳು ಹಾಗೂ ಪರಿತ್ಯಕ್ತ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿಯೇ ರಾಣಿ ಚನ್ನಮ್ಮ ಅಂತ್ಯೋದಯ ವೆಲ್ನೆಸ್ ಸೆಂಟರ್ ರೂಪ ತಳೆದಿದೆ. ವೆಲ್ನೆಸ್ ಸೆಂಟರ್ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಕಾನ್ಸೆಪ್ಟ್ ಆಗಿದ್ದು, ಬಳಕೆಯಾಗದ ಕೋಚ್ ಈಗ ಮನರಂಜನಾ ಕೇಂದ್ರದ ರೂಪ ಪಡೆದಿದೆ.
ರೈಲ್ವೆ ನಿಲ್ದಾಣ ಆವರಣದಲ್ಲಿ ಮೆಕನೈಜ್ಡ್ ಲಾಂಡ್ರಿ ಎದುರಿನ ಉದ್ಯಾನದಲ್ಲಿ ಕೆಟ್ಟು ನಿಂತ ರೈಲು ಕೋಚನ್ನೇ ಆಶ್ರಯ ಧಾಮವನ್ನಾಗಿ ರೂಪಿಸಲಾಗಿದೆ. ಮಕ್ಕಳಿಗೆ ಹಾಗೂ ಹಿರಿಯರಿಗೆ ಇಲ್ಲಿ ಮಧ್ಯಾಹ್ನ ಊಟ, ಸಂಜೆ ಸ್ಯ್ನಾಕ್ಸ್ ನೀಡಲಾಗುತ್ತದೆ. ಅನಾಥರಿಗೆ ಕೇವಲ ಭೋಜನ ನೀಡಿದರೆ ಸಾಲದು, ಅವರಿಗೆ ಮನರಂಜನೆ ಬೇಕಾಗುತ್ತದೆ. ನೋವುಗಳನ್ನು ಮರೆಯಲು, ಮನಸ್ಸು ಪ್ರಫುಲ್ಲಗೊಳಿಸಿಕೊಳ್ಳಲು ಇಲ್ಲಿ ಟಿ ಅಳವಡಿಸಲಾಗಿದೆ.
ಇಲ್ಲಿರುವ ಸಿಬ್ಬಂದಿ ದೀಪಾ ಅವರು, ಮಕ್ಕಳಿಗೆೆ ಕಥೆ ಹೇಳುತ್ತಾರೆ. ಅವರ ನೋವುಗಳಿಗೆ ಸ್ಪಂದಿಸುತ್ತಾರೆ. ಶಿಕ್ಷಣದಿಂದಾಗುವ ಪ್ರಯೋಜನ ತಿಳಿಸಿ ಶಾಲೆಗೆ ಹೋಗುವಂತೆ ಪ್ರೇರೇಪಿಸುತ್ತಾರೆ. ಆದ್ದರಿಂದ ಅನಾಥ ಮಕ್ಕಳು ಬೆಳಗ್ಗೆಯಿಂದ ಸಂಜೆವರೆಗೆ ಇಲ್ಲಿರಲು ಬಯಸುತ್ತಾರೆ. ನಿಲ್ದಾಣಕ್ಕೆ ಬರುವ ಕಾರ್ಮಿಕರ ಮಕ್ಕಳು ಕೂಡ ಇಲ್ಲಿಗೆ ಬಂದು ಆಡುತ್ತಾರೆ.
ಬೆಳಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ವೆಲ್ನೆಸ್ ಸೆಂಟರ್ ತೆರೆದಿರುತ್ತದೆ. ಉದ್ಯಾನದಲ್ಲಿ ಟಾಯ್ಲೆಟ್ ಹಾಗೂ ಬಾತ್‌ರೂಮ್ ವ್ಯವಸ್ಥೆ ಮಾಡಿರುವುದರಿಂದ ಮಕ್ಕಳು ಇಲ್ಲಿ ಸ್ನಾನ-ಶೌಚ ಮಾಡಿಕೊಂಡು ಸಂಜೆವರೆಗೂ ಇಲ್ಲಿ ನಿಶ್ಚಿಂತೆಯಿಂದ ಇರುತ್ತಾರೆ. ಪ್ರತಿ ನಿತ್ಯ ಕನಿಷ್ಟ 50 ಜನರು ಇಲ್ಲಿ ಬಂದು ಉಳಿದುಕೊಳ್ಳುತ್ತಾರೆ. ಕೋಚ್ನಿಂದ ಹೊರಗೆ ಬಂದರೆ ಉದ್ಯಾನದಲ್ಲಿ ಜೋಕಾಲಿ, ಜಾರುಬಂಡೆ ಆಡಬಹುದು.
ವೆಲ್ನೆಸ್ ಸೆಂಟರ್‌ನಲ್ಲಿ ಏನೆನಿದೆ: ವೆಲ್ನೆಸ್ ಸೆಂಟರ್‌ನಲ್ಲಿ ಎಸಿ ಹಾಗೂ ಫ್ಯಾನ್‌ಗಳ ವ್ಯವಸ್ಥೆಯಿರುವುದರಿಂದ ಮಕ್ಕಳು ಬಿರು ಬಿಸಿಲಿನಲ್ಲಿ ಆಡದೇ ಇಲ್ಲಿ ಬಂದು ಆನಂದದಿಂದ ಒಳಾಂಗಣ ಆಟ ಆಡುತ್ತಾರೆ. ಕೇರಂ, ಚೆಸ್, ರಿಂಗ್, ಬಾಲ್ ಹೀಗೆ ವಿವಿಧ ಆಟಗಳನ್ನು ಆಡಬಹುದಾಗಿದೆ. ಕುಷನ್ ಮೇಲೆ ಕುಳಿತು ಟಿವಿ ವೀಕ್ಷಿಸಬಹುದಾಗಿದೆ. ಇಲ್ಲಿ ಮನರಂಜನೆಗೆ ಹಾಗೂ ಜ್ಞಾನಾಭಿವೃದ್ಧಿಗೆ ಚಾರ್ಟ್‌ಗಳಿವೆ. ಕತೆಗಳು, ಹಣ್ಣುಗಳು, ಹೂವುಗಳು, ಕನ್ನಡ, ಇಂಗ್ಲಿಷ್ ಅಕ್ಷರಗಳು, ಗಣ್ಯರ ಭಾವಚಿತ್ರಗಳನ್ನು ತೂಗು ಹಾಕಲಾಗಿದ್ದು, ಅವುಗಳ ಕುರಿತು ವಿವರಣೆ ನೀಡಲಾಗುತ್ತದೆ.
ಕೋಚ್ ಹೊರ ಮೇಲ್ಮೈ ಮೇಲೆ ಮಕ್ಕಳು ಇಷ್ಟಪಡುವ ಛೋಟಾ ಭೀಮ್, ಮಿಕ್ಕಿಮೌಸ್ ಮೊದಲಾದ ಕಾರ್ಟೂನ್ ಚಿತ್ರ ಬಿಡಿಸಲಾಗಿದೆ. ಇಲ್ಲಿ ಮಕ್ಕಳಿಗೆ ಮಧ್ಯಾಹ್ನ ಭೋಜನ ನೀಡಲಾಗುತ್ತದೆ. ಸಂಜೆ ಬಿಸ್ಕತ್ತು, ಚಾಕ್ಲೇಟ್ ನೀಡಲಾಗುತ್ತದೆ. ಇದರ ಆಸೆಗಾಗಿಯೇ ಮಕ್ಕಳು ಪ್ರತಿದಿನ ಇಲ್ಲಿಗೆ ಬರುತ್ತಾರೆ. ಅನೇಕ ಹಿರಿಯರು ಕೆಲ ಹೊತ್ತು ಇಲ್ಲಿ ತಂಗಿ ವಿಶ್ರಾಂತಿ ಪಡೆಯುತ್ತಾರೆ. ಇಲ್ಲಿ ಯಾವುದೇ ಭೇದ ಭಾವ ಮಾಡಲ್ಲ. ಉದ್ದೇಶ ಈಡೇರಿಕೆಗಾಗಿ ವೆಲ್ನೆಸ್ ಸೆಂಟರ್‌ಗೆ ಬಂದಂಥವರಿಗೆಲ್ಲ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
•ವಿಶ್ವನಾಥ ಕೋಟಿ