ಬೀದರ: ಕುಲಪತಿಗಳ ನೇಮಕಾತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ನಡೆದ ಭ್ರಷ್ಟಾಚಾರ ತನಿಖೆ ನಡೆಸುವಂತೆ ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗುಲಬರ್ಗಾ ವಿವಿ ಸೇರಿದಂತೆ ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ಹಾಲಳ್ಳಿ(ಕೆ) ಸ್ನಾತಕೋತ್ತರ ಜ್ಞಾನ ಕಾರಂಜಿಯೆಲ್ಲಿ ಬಹುತೇಕ ಖಾಯಂ ಹುದ್ದೆಗಳು ಖಾಲಿ ಇದ್ದು, ಕೂಡಲೆ ಭರ್ತಿ ಮಾಡಬೇಕು. ಅಲ್ಲದೆ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.
ಬಡ-ಪ್ರತಿಭಾವಂತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಾರಂಭವಾದ ವಿದ್ಯಾಸಿರಿ ಯೋಜನೆ ಅನುಷ್ಠಾನಗೊಳಿಸಬೇಕು. ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾಸಿರಿ ಆನ್‌ಲೈನ್ ಅರ್ಜಿ ಕರೆಯುವಂತಾಗಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕ ಕಾಲದಲ್ಲಿ ಪರೀಕ್ಷೆ ನಡೆಸುವಂತಾಗಬೇಕು.
ಗುಲಬರ್ಗಾ ವಿವಿಯಲ್ಲಿ ಎರಡು ವರ್ಷದ ಬಿ.ಇಡಿ ಕೋರ್ಸ್ ಮರು ಆರಂಭಿಸಬೇಕು. ಗುಲಬರ್ಗಾ ವಿವಿಯಲ್ಲಿ ಇತ್ತೀಚೆಗೆ ಪರೀಕ್ಷೆ ಶುಲ್ಕ ಹೆಚ್ಚಿಸಿದ್ದು, ಕೂಡಲೆ ಶುಲ್ಕ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ಧ ಜಾಡರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನಜಯಾ, ನಗರ ಉಪಧ್ಯಕ್ಷ ಅರವಿಂದ ಸುಂದಳಕರ, ರಾಜ್ಯ ಕಾರ್ಯಕಾರಣ ಸದಸ್ಯ ಸಂಗಮೇಶ ಲದ್ದೆ, ನಗರ ಸಹ ಕಾರ್ಯದರ್ಶಿ ಅಭಿಷೇಕ ಕಲ್ಮುಡ, ಆನಂದ ಡೋಬಾಳೆ, ಸಚಿನ್ ಗುನ್ನಾಳೆ, ನವೀನ ಶಕಿಲ, ಮಾರುತಿ, ಅಹ್ಮದ, ಅಮರ ಅನುಪಮಾ, ಪ್ರರಣಾ. ವೈಶಾಲಿ, ಸೃಷ್ಟಿ, ಸ್ವಾತಿ, ಶಿವನಂದಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.